ಮಂಡ್ಯ: ರಾಜ್ಯದಲ್ಲಿ ಬಿಜೆಪಿಯಿಂದ ಮತ್ತೆ ಆಪರೇಷನ್ ಕಮಲ ನಡೆಯಲಿದೆಯಾ ಎಂಬ ಅನುಮಾನ ಶುರುವಾಗಿದೆ. ಆಪರೇಷನ್ ಕಮಲ ತಡೆಯಲು ಮುಂದಾದ ಜೆಡಿಎಸ್ ಸಂಚು ಕೊನೆ ಕ್ಷಣದಲ್ಲಿ ಕೈತಪ್ಪಿದೆ ಎಂದು ತಿಳಿದು ಬಂದಿದೆ. ಯಾಕೆಂದರೆ ಮಂಡ್ಯದ ಜೆಡಿಎಸ್ ಶಾಸಕ ಸುರೇಶ್ಗೌಡ ಬಿಜೆಪಿಯ ಎರಡನೇ ಹಂತದ ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನ ಬರಲ್ಲ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತೆ 2ನೇ ಹಂತದ ಆಪರೇಷನ್ ಕಮಲ ನಡೆಯಬಹುದು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾಗಮಂಗಲದಲ್ಲಿ ಮಾತನಾಡಿದ ಅವರು, ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನ ಬರಲ್ಲ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಮತ್ತೆ 2ನೇ ಹಂತದ ಆಪರೇಷನ್ ಕಮಲ ನಡೆಯಬಹುದು. ಈ ಆಪರೇಷನ್ ಕಮಲ ತಡೆಯಲು ನಾವೇ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದೆವು. ಅವರು ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡರೆ, ಜೆಡಿಎಸ್ ಪಕ್ಷ ಬಿಜೆಪಿಗೆ ಸಪೋರ್ಟ್ ಮಾಡಲು ನಿರ್ಧರಿಸಿತ್ತು. ಆದರೆ ಪ್ರಸ್ತುತ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ ನೋಡುತ್ತಿದ್ದರೆ ಅದು ಕಷ್ಟ. ಬಿಜೆಪಿಯವರು ನಮ್ಮ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನಿಸುತ್ತದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
2017-18ರಲ್ಲಿ ಕೊಟ್ಟ ಅನುದಾನ, ಅಗ್ರಿಮೆಂಟ್ ಆಗಿದ್ದ ಕಾಮಗಾರಿ ಎಲ್ಲವನ್ನೂ ತಡೆದಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಅವರಿಗೆ ಅಧಿಕಾರ ಬೇಕು, ಉಳಿದಿದ್ದೆಲ್ಲಾ ಬೇಡ ಎನ್ನವ ಹಾಗೆ ಕಾಣಿಸುತ್ತಿದೆ. ಈ ಮುಂಚಿನಿಂದಲೂ ನಮಗೆ ಬಿಜೆಪಿ ಸೇರುವಂತೆ ಆಫರ್ ಬರುತ್ತಿದೆ. ನಮ್ಮ ಪಕ್ಷದಿಂದ ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ಇದೇ ಪರಿಸ್ಥಿತಿ ಎಷ್ಟು ದಿನ ಇರುತ್ತೆ ಅಂತ ನೋಡೋಣ. ಅಲ್ಲಿಯವರೆಗೂ ಎಲ್ಲವನ್ನೂ ಎದುರಿಸುತ್ತೇವೆ ಎಂದು ಸುರೇಶ್ಗೌಡ ಹೇಳಿದ್ದಾರೆ.