ಚಿದು, ಕಾರ್ತಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ : ಪಟ್ಟಿಯಲ್ಲಿ 6 ಜನ ಅಧಿಕಾರಿಗಳು

ಹೊಸದಿಲ್ಲಿಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ 2000 ಪುಟಗಳ ಹೊಸ ಆರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದೆ.

ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಈ ಚಾರ್ಜ್ಶೀಟ್ನಲ್ಲಿ ಪಿ. ಚಿದಂಬರಂ ಮತ್ತು ಅವರ ಮಗ ಕಾರ್ತಿ ಸೇರಿದಂತೆ ಈ ಹಿಂದೆ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದ 6 ಅಧಿಕಾರಿಗಳ ಹೆಸರಿರುವುದು ಗಮನಾರ್ಹ.
ಪಿ. ಚಿದಂಬರಮ್, ಅವರ ಮಗ ಕಾರ್ತಿ ಚಿದಂಬರಮ್, ಐಎನ್ಎಕ್ಸ್ ಮೀಡಿಯಾ ಮಾಲೀಕರಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಚಾರ್ಜ್ಶೀಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ವಿಶೇಷ ನ್ಯಾಯಾಧೀಶ ಲಾಲ್‌ ಸಿಂಗ್‌ ಸಮ್ಮುಖದಲ್ಲಿಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯಿದೆ ಅಡಿ, ಸರಕಾರದ ಬೊಕ್ಕ­ಸಕ್ಕೆ ನಷ್ಟ ಉಂಟು­ಮಾಡಿದ ದೋಷಾರೋಪ­ವನ್ನು ಚಿದಂಬರಂ ಸೇರಿ 14ಆರೋಪಿಗಳ ವಿರುದ್ಧ ಹೊರಿಸಲಾಗಿದೆ.
ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯ ಮುಖ್ಯಸ್ಥ ಪೀಟರ್‌ ಮುಖರ್ಜಿ, ಚಾರ್ಟರ್ಡ್‌ ಅಕೌಂಟೆಂಟ್‌ ಎಸ್‌. ಭಾಸ್ಕರನ್‌, ನೀತಿ ಆಯೋಗದ ಮಾಜಿ ಸಿಇಒ ಸಿಂಧುಶ್ರೀ ಖುಲ್ಲರ್‌, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಅನೂಪ್‌ ಕೆ. ಪೂಜಾರಿ ಸೇರಿದಂತೆ ಹಲವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಪ್ರಕರಣದಲ್ಲಿಮಾಫಿ ಸಾಕ್ಷಿಯಾಗಿ ಬದಲಾದ ಇಂದ್ರಾಣಿ ಮುಖರ್ಜಿ ಅವರ ಹೆಸರೂ ಉಲ್ಲೇಖಗೊಂಡಿದೆ. 2007ರಲ್ಲಿ ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಗೆ ವಿದೇಶದಿಂದ ಹಣ ಹೂಡಿಕೆಗೆ ಅನುಮತಿ ನೀಡಲು ಕಿಕ್‌ಬ್ಯಾಕ್‌ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಕಾನೂನು ಉಲ್ಲಂಘಿಸಿ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅನುಮೋದನೆ ಕೊಡಿಸಿದ್ದಕ್ಕಾಗಿ ಚಿದಂಬರಂ ಪುತ್ರನ ಖಾತೆಗೆ 305 ಕೋಟಿ ರೂ. ಹಣ ನೀಡಿದ ಆರೋಪ ಕೇಳಿಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ