ಭಾಗಮಂಡಲ: ಕೊಡವರ ಕುಲದೇವತೆ ಕಾವೇರಿ ಜನ್ಮಸ್ಥಳ ತಲಕಾವೇರಿಯಲ್ಲಿ ಅರ್ಚಕರ ಮಂತ್ರಘೋಷ ,ಮಂಗಳವಾದ್ಯ ನಡುವೆ ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕ ಲಗ್ನ, ರೋಹಿಣಿ ನಕ್ಷತ್ರದಲ್ಲಿ ಘಟಿಸಿದ ಪವಿತ್ರ ತೀರ್ಥೋದ್ಭವವನ್ನು ರಾಜ್ಯ ಮತ್ತು ಹೊರರಾಜ್ಯದಿಂದ ಬಂದ ನೂರಾರು ಭಕ್ತರು ಕಣ್ತುಂಬಿಕೊಂಡರು.
12:59ಕ್ಕೆ ತೀರ್ಥೋದ್ಭವ ಘಟಿಸಲಿದೆ ಎಂದು ಹೇಳಲಾಗಿತ್ತಾದರೂ 2 ನಿಮಿಷ ಮುನ್ನವೇ ತೀರ್ಥೋದ್ಭವಾಯಿತು. 30 ಕ್ಕೂ ಹೆಚ್ಚು ಅರ್ಚಕರ ಮಂತ್ರಘೋಷ, ಮಂಗಳವಾದ್ಯದ ನಡುವೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಈ ವಿಸ್ಮಯಕ್ಕೆ ಅಪಾರ ಭಕ್ತ ಸಮೂಹ ಸಾಕ್ಷಿಯಾಯಿತು. ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ರುದ್ರಾಭಿಷೇಕ , ಕುಂಕುಮಾರ್ಚನೆ ಸೇರಿದಂತೆ ಪೂಜಾ ಕಾರ್ಯಗಳು ನಡೆದವು.ಭಕ್ತರು ತೀರ್ಥಪ್ರೋಕ್ಷಣೆ ಮಾಡಿಸಿಕೊಳ್ಳಲು , ಹಾಗೂ ಬಾಟಲಿ, ಬಿಂದಿಗೆಗಳಲ್ಲಿ ತೀರ್ಥ ತುಂಬಿಸಿಕೊಳ್ಳು ಮುಗಿಬಿದ್ದರು.
ರಾಜ್ಯವಲ್ಲದೆ ಕೇರಳ. ತಮಿಳುನಾಡು , ಮತ್ತಿತರ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಪ್ರಾಕೃತಿಕ ವಿಕೋಪ ಮತ್ತು ಮಳೆಯ ಅಬ್ಬರದ ಹಿನ್ನಲೆಯಲ್ಲಿ ಈ ಭಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿಪಿ ಅವರ ನೇತೃತ್ವದಲ್ಲಿ ತೀರ್ಥೋದ್ಬವಕ್ಕೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.