ದುಷ್ಕರ್ಮಿಗಳಿಂದ ವೃದ್ದ ದಂಪತಿಗಳ ಕೊಲೆ

ಬೆಂಗಳೂರು,ಅ.17:  ಮನೆಯೊಳಗೆಯೇ ವೃದ್ದ ದಂಪತಿ ಅವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾತ್ರಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗರುಡಾಚಾರ್ ಪಾಳ್ಯದ ಆರ್‍ಎಚ್‍ಬಿ ಕಾಲೋನಿಯ ನಿವಾಸಿ ಚಂದ್ರೇಗೌಡ(63), ಅವರ ಪತ್ನಿ ಲಕ್ಷ್ಮಮ್ಮ (55) ಕೊಲೆಯಾದ ವೃದ್ಧ ದಂಪತಿ.
ವೃದ್ದ ದಂಪತಿ ಅವರ ಕೊಲೆಗೆ ಸದ್ಯಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹಣ, ಆಭರಣಕ್ಕಾಗಿ ದರೋಡೆಕೋರರು ಈ ಕೃತ್ಯ ಎಸಗಿರುವ ಶಂಕೆ ಇದೆ.
ಮೂಲತಃ ಕೆಆರ್‍ಪೇಟೆ ತಾಲ್ಲೂಕಿನವರಾದ ಚಂದ್ರೇಗೌಡ ಅವರು ಕಾರ್ಖಾನೆಯೊಂದರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಆರ್‍ಬಿಎಚ್ ಕಾಲೋನಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದರು.
ಐದಾರು ಮನೆಗಳನ್ನು ಬಾಡಿಗೆಗೆ ನೀಡಿ ಒಂದು ಮನೆಯಲ್ಲಿ ಈ ವೃದ್ದ ದಂಪತಿ ಇದ್ದರು. ಇವರಿಗೆ ಸಾಕು ಮಗಳೊಬ್ಬರಿದ್ದು, ಈಗಾಗಲೇ ಮದುವೆ ಮಾಡಿ ಕೊಡಲಾಗಿದೆ.
ದುಷ್ಕರ್ಮಿಗಳು ರಾತ್ರಿ ಇವರ ಮನೆಗೆ ನುಗ್ಗಿ ಹಾಲ್‍ನಲ್ಲಿ ಚಂದ್ರೇಗೌಡ ಅವರನ್ನು ಹಾಗೂ ಬೆಡ್‍ರೂಮ್‍ನಲ್ಲಿ ಲಕ್ಷ್ಮಮ್ಮ ಅವರನ್ನು ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಬೀರುಗಳ ಬಾಗಿಲು ತೆಗೆದು ಅಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಡಿ ಕೊನೆಗೆ ಮುಂಬಾಗಿಲ ಚಿಲಕ ಹಾಕಿಕೊಂಡು ಪರಾಗಿಯಾಗಿದ್ದಾರೆ.
ಕೊಲೆಯ ನಂತರ ದುಷ್ಕರ್ಮಿಗಳು ಮನೆಯಿಂದ ಹಣ, ಆಭರಣಗಳನ್ನು ತೆಗೆದುಕೊಂಡಿರುವ ಬಗ್ಗೆ ಇನ್ನು ತಿಳಿದುಬಂದಿಲ್ಲ.
ಬೆಳಗ್ಗೆ ಸ್ಥಳೀಯ ನಿವಾಸಿ ಶಿವರಾಜ್ ಎಂಬುವರು ಇವರ ಮನೆ ಬಳಿ ಬಂದಾಗ ಈ ಜೋಡಿ ಕೊಲೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜೋಡಿ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಡಿಸಿಪಿ ಅನುಚೇತ್ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ