ಇನ್ನಿಬ್ಬರು ರಾಜ್ಯಸಭಾ ಸದಸ್ಯರಿಗೆ ಆಪರೇಷನ್ ಕಮಲದ ಮೂಲಕ ಗಾಳ

ಬೆಂಗಳೂರು,ಅ.18- ಈಗಾಗಲೇ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ  ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ರಾಜ್ಯದ ಇನ್ನಿಬ್ಬರು ರಾಜ್ಯಸಭಾ ಸದಸ್ಯರಿಗೆ ಆಪರೇಷನ್ ಕಮಲದ ಮೂಲಕ ಗಾಳ ಹಾಕಿದೆ.

ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಲಿ ರಾಜ್ಯಸಭಾ ಸದಸ್ಯರೂ ಆಗಿರುವ ಜೈರಾಮ್ ರಮೇಶ್ ಅವರನ್ನು ಪಕ್ಷಕ್ಕೆ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಲು ವೇದಿಕೆ ಸಿದ್ದಪಡಿಸಿಕೊಂಡಿರುವ ಕೆ.ಸಿ.ರಾಮಮೂರ್ತಿ ಸೇರಿದಂತೆ ಸದ್ಯದಲ್ಲೇ  ರಾಜ್ಯದ ಇನ್ನಿಬ್ಬರು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮಾತುಕತೆಗಳು ಸಕಾರಾತ್ಮಕವಾಗಿ ನಡೆದಿದ್ದು, ಸ್ವಲ್ಪ ದಿನದವರೆಗೂ ಕಾದು ನೋಡಿ ಎಂದು ಕುತೂಹಲ ಕೆರಳಿಸಿದ್ದಾರೆ.

ಯಾರು ಬಿಜೆಪಿಗೆ ಬರಲಿದ್ದಾರೆ ಎಂಬುದನ್ನು ನಾನು ಬಹಿರಂಗ ಮಾಡುವುದಿಲ್ಲ. ಇಬ್ಬರು ರಾಜ್ಯಸಭಾ ಸದಸ್ಯರಂತೂ ಬಿಜೆಪಿಗೆ ಸೇರ್ಪಡೆಯಾಗುವುದು 100ಕ್ಕೆ ನೂರು ಖಚಿತ.ಎಲ್ಲವೂ ನಿರೀಕ್ಷೆಯಂತೆ ನಡೆಯುತ್ತಿರುವುದರಿಂದ ಆ ಇಬ್ಬರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಕುಪೇಂದ್ರ ರೆಡ್ಡಿ ಜೆಡಿಎಸ್ ತೊರೆಯುವುದಿಲ್ಲ ಎಂದು ಖಚಿತವಾಗಿ ಹೇಳಿದ್ದರೂ ಅವರನ್ನು ಬಿಜೆಪಿಗೆ ಸೆಳೆಯಲು ಬೆಂಗಳೂರಿನ ಪ್ರಭಾವಿ ಬಿಜೆಪಿ  ಮುಖಂಡರೊಬ್ಬರು ಮಾತುಕತೆ ನಡೆಸಿದ್ದಾರೆ.

ಪಕ್ಷಕ್ಕೆ ಬಂದರೆ ಎಲ್ಲ ರೀತಿಯ ಸ್ಥಾನಮಾನ ನೀಡುವ  ಆಶ್ವಾಸನೆಯೊಂದಿಗೆ ಮಾತುಕತೆಗಳು ನಡೆದಿವೆ. ಜೊತೆಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ ಕುಪೇಂದ್ರ ರೆಡ್ಡಿ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಜೈರಾಮ್ ರಮೇಶ್‍ಗೂ ಗಾಳ:

ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಭಾವಿ ಮುಖಂಡನೆಂದೇ ಹೇಳಲಾಗಿರುವ ಜೈರಾಮ್ ರಮೇಶ್ ಕೂಡ ಬಿಜೆಪಿ ಸಂಪರ್ಕದಲ್ಲಿದ್ದಾರೆ.ಕಾಂಗ್ರೆಸ್ ನಾಯಕತ್ವದ ಬಗ್ಗೆ ಬೇಸರಗೊಂಡಿರುವ ಅವರು ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಕಾರಣಕ್ಕಾಗಿ ಕೈ ತೊರೆದು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅತ್ಯುಗ್ರವಾಗಿ ಟೀಕೆ ಮಾಡುತ್ತಿದ್ದ ಜೈರಾಮ್ ರಮೇಶ್ ಇತ್ತೀಚೆಗೆ ಅವರ ಬಗ್ಗೆ ಮೃಧುಧೋರಣೆ ತೋರುತ್ತಿದ್ದಾರೆ.

ಮೋದಿ ಸರ್ಕಾರದ ಕೆಲವು ಮಹತ್ವದ ನಿರ್ಧಾರಗಳನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದರು.ಮೂಲತಃ ಚಿಕ್ಕಮಗಳೂರಿನವರಾದ ಜೈರಾಮ್ ರಮೇಶ್ ಯುಪಿಎ ಸರ್ಕಾರದ ಅವಧಿಯಲ್ಲಿ ಅತ್ಯಂತ ಪ್ರಬಲ ಖಾತೆಯನ್ನು ನಿಭಾಯಿಸಿದ್ದರು.

ಅಲ್ಲದೆ ಪಕ್ಷದ ನೀತಿ ನಿರೂಪಣೆಗಳನ್ನು ತೀರ್ಮಾನಿಸುವುದರಲ್ಲಿ ಅವರು ಪ್ರಮುಖರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಸತತ ಎರಡು  ಬಾರಿ ಕಾಂಗ್ರೆಸ್ ಮುಗ್ಗರಿಸಿರುವುದು ರಾಹುಲ್ ಗಾಂಧಿ ನಾಯಕತ್ವದ ವೈಫಲ್ಯ, ಸಾಲು ಸಾಲು ಸರಣಿ ಸೋಲು, ಆಂತರಿಕ ಕಚ್ಚಾಟ ಈ ಬೆಳವಣಿಗೆಯಿಂದಲೇ ಬೇಸತ್ತು ಜೈರಾಮ್ ರಮೇಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಜೈರಾಮ್ ರಮೇಶ್ ಅವರನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮೂಲಕ ಗಾಳ ಹಾಕಲಾಗಿದೆ.ಅಲ್ಲದೆ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅವರ ಜೊತೆ ಮಾತುಕತೆ ನಡೆಸಿದ್ದು, ಎಲ್ಲವೂ ಸಕಾರಾತ್ಮಕವಾಗಿ ನಡೆಯುತ್ತಿವೆ.

ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಇನ್ನು ಹನ್ನೆರಡು ಸದಸ್ಯರ ಬೆಂಬಲ ಬೇಕು.ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ ಸರಳ ಬಹುಮತ ಪಡೆಯಲು ಬಿಜೆಪಿ ನೇತೃತ್ವ ದ ಎನ್‍ಡಿಎ ಮೈತ್ರಿ ಕೂಟಕ್ಕೆ ಇನ್ನು 12 ಸ್ಥಾನಗಳ ಅಗತ್ಯವಿದೆ.

ಹಾಗಾಗಿ ಕಾಂಗ್ರೆಸ್‍ನಲ್ಲಿ  ಅಸಮಾಧಾನಗೊಂಡಿರುವ ರಾಜ್ಯಸಭಾ ಸದಸ್ಯರನ್ನು ಸದ್ದಿಲ್ಲದೆ  ಪಕ್ಷಕ್ಕೆ ಕರೆತರುವ ಆಪರೇಷನ್ ಕಮಲ ಮುಂದುವರೆದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ