ಪಿಯುಸಿ ಪರೀಕ್ಷೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು-ಸಚಿವ ಎಸ್.ಸುರೇಶ್‍ಕುಮಾರ್

ಬೆಂಗಳೂರು,ಅ.16- ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.
ತಮ್ಮ ಇಲಾಖೆಯ ಕಡತ ವಿಲೇವಾರಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾರ್ಚ್‍ನಲ್ಲಿ ನಡೆಯಲಿರುವ 2019-20ನೇ ಸಾಲಿನ ಪರೀಕ್ಷಾ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಾರದು. ಸಾಮೂಹಿಕ ನಕಲಿಗೆ ಅವಕಾಶ ನೀಡಬಾರದು ಹಾಗೂ ಉತ್ತರಪತ್ರಿಕೆಗಳ ಮೌಲ್ಯ ಮಾಪನದಲ್ಲಿ ಯಾರಿಗೂ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ಮುಂದಿನ ಜನವರಿಯಲ್ಲಿ ಶಿಕ್ಷಣ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಜಂಟಿ ಸಭೆ ನಡೆಸಿ ಪಿಯುಸಿ ಪರೀಕ್ಷೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾಲ್ಕು ವರ್ಷದ ಹಿಂದೆ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪತ್ರಿಕೆ ಸೋರಿಕೆಯಾಗಿ ಉಂಟಾದ ತೊಂದರೆ ಇನ್ನು ನೆನಪಿನಲ್ಲಿದೆ. ಈಗ ಸೋರಿಕೆಗೆ ಕಡಿವಾಣ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೆÇಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದು, ಕಿಂಗ್‍ಪಿನ್‍ಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಮೊದಲ ಸಭೆ ನಡೆಸಿದ್ದು, ರಾಜ್ಯದಲ್ಲಿ ಎಲ್ಲೆಲ್ಲಿ ಉತ್ತಮ ಪರಿಸ್ಥಿತಿ ಇದೆ, ಎಲ್ಲೆಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ ಎಂಬುದರ ಬಗ್ಗೆ ಚರ್ಚಿಸಲಾಗಿದೆ ಎಂದರು.

ಸಚಿವಾಲಯದ ಹಂತದಲ್ಲಿ 5,099 ಕಡತಗಳು ಬಾಕಿ ಇವೆ. ಸೆಪ್ಟೆಂಬರ್ 1ರಿಂದ ಅ.15 ನಡುವಿನ ಅವಧಿಯಲ್ಲಿ 173 ಕಡತಗಳು ಪ್ರಾರಂಭಿಸಲಾಗಿದೆ. ಆದರೆ 441 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಒಂದೇ ಒಂದೂ ಕಡತ ವಿಲೇವಾರಿಯಾಗಲು 15 ದಿನ ಸಮಯಾವಕಾಶ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸ್ಪಷ್ಟೀಕರಣ ಕೇಳಲಾಗಿದೆ.

ಶಿಕ್ಷಕರು, ಶಿಕ್ಷಕರ ಸಂಘದ ಪ್ರತಿನಿಧಿಗಳು, ವಿಧಾನಪರಿಷತ್ ಸದಸ್ಯರು ಕಡತ ವಿಲೇವಾರಿ ವಿಳಂಬದ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದು, ಯಾವ ಯಾವ ಹಂತದಲ್ಲಿ ಎಷ್ಟು ಕಡತಗಳು ಬಾಕಿ ಇವೆ, ಕಡತ ವಿಲೇವಾರಿಯನ್ನು ಚುರುಕುಗೊಳಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಲಾಗುವುದು. ಇಲಾಖೆಯ ಇತರ ಶಾಖೆಗಳಿಗೂ ಭೇಟಿ ನೀಡಿ ಕಡತ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ