ಬೆಂಗಳೂರು, ಅ.16- ಬೆಂಗಳೂರು ಮೂಲದ ಸ್ಟಾರ್ಟಪ್ ಸೀಡ್ ಪೇಪರ್ ಇಂಡಿಯಾ ಇದೇ ಮೊದಲ ಬಾರಿಗೆ ಪರಿಸರಸ್ನೇಹಿ ಪಟಾಕಿಗಳನ್ನು ತಯಾರಿಸಿದೆ.
ಈ ಮೂಲಕ ಈ ಬಾರಿಯ ದೀಪಾವಳಿಯನ್ನು ಆವಿಷ್ಕಾರಕ ಮತ್ತು ವಿನೂತನವಾದ ರೀತಿಯಲ್ಲಿ ಆಚರಿಸಬಹುದಾಗಿದೆ. ಇದರ ಉದ್ದೇಶ ದೀಪಾವಳಿಯನ್ನು ಹೊಗೆರಹಿತ ಮತ್ತು ಶಬ್ಧ ರಹಿತವಾಗಿ ಪರಿಸರ ಸ್ನೇಹಿಯಾಗಿ ಆಚರಣೆ ಮಾಡಬೇಕೆಂಬುದಾಗಿದೆ.
ತುಳಸಿ ಬೀಜ ಪಟಾಕಿ, ಅಕಾ ಬಿಜಲಿ ಸೀಡ್ ಬಾಂಬ್ಸ್, ಟೊಮಾಟೋ ಬೀಜ ಬಾಂಬ್, ಹೈಡ್ರೋಜನ್ ಬಾಂಬ್, ತುಳಸಿ ಬೀಜ ಬಾಂಬ್, ರಾಕೆಟ್ ಪಟಾಕಿ ಸೇರಿದಂತೆ ಇನ್ನೂ ಹಲವು ಆವಿಷ್ಕಾರಕ ಉತ್ಪನ್ನಗಳನ್ನು ಸೀಡ್ ಪೇಪರ್ ತಯಾರಿಸಿ ಗ್ರಾಹಕರ ಕೈಗಿಡಲಿದೆ.
ಈ ಪಟಾಕಿಗಳು ಮತ್ತು ಇತರೆ ಉತ್ಪನ್ನಗಳು ಗ್ರಾಹಕರು ಮತ್ತು ಮಾರಾಟಗಾರರಿಗೆ ಲಭ್ಯವಿದೆ. ಸೀಡ್ ಪೇಪರ್ ಇಂಡಿಯಾದ ಸಂಸ್ಥಾಪಕ ರೋಶನ್ ರೇ ಅವರು ಈ ವಿನೂತನವಾದ ಉತ್ಪನ್ನಗಳನ್ನು ಇದೇ ಮೊದಲ ಬಾರಿಗೆ ದೀಪಾವಳಿಗೆ ಆವಿಷ್ಕರಿಸಿದ್ದಾರೆ. ಈ ಪಟಾಕಿಗಳು ಹೊಗೆರಹಿತ, ಶಬ್ಧರಹಿತ ಮತ್ತು ಅತ್ಯಂತ ಸುರಕ್ಷಿತವಾಗಿರುತ್ತವೆ.
ಸೀಡ್ ಪೇಪರ್ ಇಂಡಿಯಾದ ಸಂಸ್ಥಾಪಕ ರೋಶನ್ ರೇ ಅವರು ಮಾತನಾಡಿ, ನಾವು ಆವಿಷ್ಕರಿಸಿರುವ ಪಟಾಕಿಗಳು ಸಾಮಾನ್ಯ ಪಟಾಕಿಗಳಂತಿವೆ. ಆದರೆ ಇವು ನೋಡಲು ಹಾಗೆ ಕಾಣಿಸುತ್ತವೆ. ಆದರೆ, ಈ ಪಟಾಕಿಗಳು ಸಿಡಿಯುವುದಿಲ್ಲ ಅಥವಾ ಸ್ಫೋಟಗೊಳ್ಳವುದಿಲ್ಲ. ಇವುಗಳನ್ನು ನೆಲದ ಮೇಲಿಡಬೇಕು, ಶಬ್ಧ ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡುತ್ತವೆ ಎಂದು ತಿಳಿಸಿದರು.
ಈ ಬಾರಿಯ ದೀಪಾವಳಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪರಿಸರಸ್ನೇಹಿಯಾಗಿ ಆಚರಿಸಬೇಕಿದೆ. ಇದಕ್ಕಾಗಿ ಇದು ಸಕಾಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.