ಸುಪ್ರೀಂಕೋರ್ಟ್‍ನಲ್ಲಿ ಅಂತಿಮ ತೀರ್ಪು ಬರುವವರೆಗೂ ಅಭ್ಯರ್ಥಿಗಳ ಘೋಷಣೆ ಮಾಡದಿರಲು ಬಿಜೆಪಿ ತೀರ್ಮಾನ

ಬೆಂಗಳೂರು,ಅ.14-ಸುಪ್ರೀಂಕೋರ್ಟ್‍ನಲ್ಲಿ ಅಂತಿಮ ತೀರ್ಪು ಬರುವವರೆಗೂ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡದಿರಲು ಬಿಜೆಪಿ ತೀರ್ಮಾನಿಸಿದೆ.

ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಡಿ.9ರಂದು ಫಲಿತಾಂಶ ಪ್ರಕಟವಾಗಲಿದೆ.ನ.21ರಿಂದ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಈಗಾಗಲೇ ಎರಡು ಕಡೆ ವಾದ-ವಿವಾದ ಬಹುತೇಕ ಅಂತಿಮಗೊಂಡಿz ಪ್ರಕಟಿಸುತ್ತದೆಯೇ ಎಂಬುದಷ್ಟೇ ಬಾಕಿ ಉಳಿದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಉಪಚುನಾವಣೆಗೆ ಸಿದ್ದತೆಗಳನ್ನು ಆರಂಭಿಸಿದರೂ ಬಿಜೆಪಿ ತೀರ್ಪು ನೋಡಿಕೊಂಡೇ ಅಖಾಡಕ್ಕೆ ಇಳಿಯಲಿದೆ.

ಸ್ಪೀಕರ್ ತೆಗೆದುಕೊಂಡ ಆದೇಶವನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದರೆ ಅನರ್ಹಗೊಂಡ ಶಾಸಕರಿಗೆ ಬಹುತೇಕ ಟಿಕೆಟ್ ಖಾತ್ರೆಯಾಗಲಿದೆ.

ಒಂದು ವೇಳೆ ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದರೆ ಇಡೀ ಚುನಾವಣೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ.ಏಕೆಂದರೆ ನಿಕಟಪೂರ್ವ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ನೀಡಿರುವ ಆದೇಶದಲ್ಲಿ 2023ರವರೆಗೂ ಅನರ್ಹ ಶಾಸಕರು ಯಾವುದೇ ಚುನಾವಣೆಯನ್ನು ಸ್ಪರ್ಧಿಸುವಂತಿಲ್ಲ.

ನ್ಯಾಯಾಲಯ ಸ್ಪೀಕರ್ ಆದೇಶ ಸರಿಯಿದೆ ಎಂದರೆ ಅನಿವಾರ್ಯವಾಗಿ  15 ಕ್ಷೇತ್ರಗಳಲ್ಲಿ ಅನರ್ಹ  ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೇರೊಬ್ಬರನ್ನು ಕಣಕ್ಕಿಳಿಸಬೇಕಾಗುತ್ತದೆ.

ಇವೆಲ್ಲವನ್ನೂ ಲೆಕ್ಕಾಚಾರ ಹಾಕಿರುವ ಬಿಜೆಪಿ, ನ್ಯಾಯಾಲಯದ ತೀರ್ಪು ಬರುವವರೆಗೂ ಅಭ್ಯರ್ಥಿಗಳ ಆಯ್ಕೆ ಮಾಡುವ ಗೋಜಿಗೆ ಹೋಗದಿರಲು ನಿರ್ಧರಿಸಿದೆ.

ಈಗಾಗಲೇ  ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮತ್ತಿತರರು ನ್ಯಾಯಾಲಯದ ತೀರ್ಪು ಅನರ್ಹರ ಪರವಾಗಿ ಬಂದರೆ ಟಿಕೆಟ್ ಕೊಡುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೂ  ಅನರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಅಭಯ ನೀಡಿದ್ದಾರೆ.

ಎರಡು ವಾರಗಳ ಹಿಂದಷ್ಟೇ ಅನರ್ಹ ಶಾಸಕರು ಸಂತೋಷ್ ಅವರನ್ನು ಭೇಟಿ ಮಾಡಿ  ಮಾತುಕತೆ ನಡೆಸಿದ್ದರು. ಜೊತೆಗೆ ಆಗಾಗ್ಗೆ ಬಿಎಸ್‍ವೈ ಅವರನ್ನು ಭೇಟಿಯಾಗಿ ತಮ್ಮಿಂದಲೇ ಸರ್ಕಾರ ರಚನೆಯಾಗಿದ್ದು, ನಮ್ಮನ್ನು ಕಡೆಗಣಿಸಬಾರದೆಂಬ ಮನವಿಯನ್ನು ಅನರ್ಹರು ಮಾಡುತ್ತಲೇ ಬಂದಿದ್ದಾರೆ.

ಹೀಗಾಗಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವವರೆಗೂ 15 ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸದೆ ಕಾದು ನೋಡುವ ತಂತ್ರ ಅನುಸರಿಸಲಿದೆ.

ಬಹುತೇಕ ಅನರ್ಹ ಶಾಸಕರು, ನ್ಯಾಯಾಲಯದಲ್ಲಿ ತೀರ್ಪು ತಮ್ಮ ಪರವಾಗಿಯೇ ಬರಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದಾರೆ.

ತಮ್ಮ ವಕೀಲರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದಾರೆ.ಸ್ಪೀಕರ್ ರಾಜಕೀಯ ದುರುದ್ದೇಶದಿಂದ ತಮ್ಮನ್ನು ಅನರ್ಹಗೊಳಿಸಿದ್ದಾರೆ.ಇದು ನ್ಯಾಯಾಲಯದಲ್ಲಿ ಊರ್ಜಿತಗೊಳ್ಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ ಅನರ್ಹ ಶಾಸಕರು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಂ, ಶಿವಾಜಿನಗರ,  ಯಶವಂತಪುರ, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಮೈಸೂರಿನ ಹುಣಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು, ಬೆಳಗಾವಿಯ ಗೋಕಾಕ್, ಕಾಗವಾಡ, ಅಥಣಿ, ಬಳ್ಳಾರಿ ಜಿಲ್ಲೆಯ ವಿಜಯನಗರ, ಉತ್ತರಕನ್ನಡ ಜಿಲ್ಲೆಯಯಲ್ಲಾಪುರ ಕ್ಷೇತ್ರಗಳಿಗೆ ಡಿ.5ರಂದು ಉಪಚುನಾವಣೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ