ವಿಧಾನಸೌಧದಲ್ಲಿ ಇಲಿ ಸತ್ತು ದುರ್ನಾತ

ಬೆಂಗಳೂರು, ಅ.14- ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಲಿ ಸತ್ತು ದುರ್ನಾತ ಬೀರಿದ ಪರಿಣಾಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ಕಾರ್ಯಕ್ರಮವನ್ನು ಸ್ಥಳಾಂತರ ಮಾಡಿದ ಅಪರೂಪದ ಘಟನೆ ಇಂದು ನಡೆಯಿತು.

ಬೆಳಗ್ಗೆ ಯಡಿಯೂರಪ್ಪನವರನ್ನು ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ವಿವಿಧ ನಿಯೋಗಗಳು ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿತ್ತು.ಇದರಂತೆ 10.30ಕ್ಕೆ ಅವರು ಸಹ ವಿಧಾನಸೌಧಕ್ಕೆ ಆಗಮಿಸಿದ್ದರು.

ಈ ಕೊಠಡಿಯಲ್ಲಿ ಇಲಿಗಳು ಸತ್ತು ದುರ್ನಾತ ಬೀರುತ್ತಿತ್ತು. ಮುಖ್ಯಮಂತ್ರಿಯವರ ಗಮನಕ್ಕೆ ತಂದರೆ, ತಮಗೆ ಗ್ರಹಚಾರ ವಕ್ಕರಿಸಿಕೊಳ್ಳಬಹುದೆಂಬ ಭೀತಿಯಿಂದಾಗಿ  ಅಧಿಕಾರಿಗಳು ಸತ್ತ ಇಲಿಯ ದುರ್ನಾತವನ್ನೇ ಸಹಿಸಿಕೊಂಡಿದ್ದರು.

ನಿಗದಿತ ಸಮಯಕ್ಕೆ ಸರಿಯಾಗಿ  ಕೊಠಡಿಗೆ ಸಿಎಂ ಆಗಮಿಸುತ್ತಿದ್ದಂತೆ ಕೆಟ್ಟ ವಾಸನೆ ಮೂಗಿಗೆ ಬಡಿದಿದೆ. ಇದರಿಂದ ಬೇಸತ್ತ ಅವರು, ಏನ್ರಿ ಇದೆಲ್ಲಾ, ಕಡೆಪಕ್ಷ ಇದನ್ನು ಸರಿಪಡಿಸಬೇಕೆಂಬ ಕನಿಷ್ಠ ಜ್ಞಾನ  ಇಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದೇನಿದು ದುರ್ವಾಸನೆ?ಮೊದಲು ಇದನ್ನು ಕ್ಲೀನ್ ಮಾಡು ಇಲ್ಲದಿದ್ದರೆ ನಿನಗೆ ಗ್ರಹಚಾರ ಬಿಡಿಸುತ್ತೇನೆ ಎಂದು ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರ ಮೇಲೆ ಯಡಿಯೂರಪ್ಪ ಹರಿಹಾಯ್ದರು.ಅದು-ಇದು ಎಂದು ಸಬೂಬು ಹೇಳಲು ಮುಂದಾಗುತ್ತಿದ್ದಂತೆ ಇನ್ನಷ್ಟು ಕುಪಿತರಾದ ಬಿಎಸ್‍ವೈ ಇಲ್ಲ-ಸಲ್ಲದ ಕಾರಣ ಹೇಳಬೇಡ.ಮೊದಲು ಸರಿ ಮಾಡುತ್ತಿಯೋ ಇಲ್ಲವೋ ಎಂದು ದಬಾಯಿಸಿದರು.

ಕೊನೆಗೆ ಈ ಕೊಠಡಿಯಿಂದ ಇಲಿಯ ದುರ್ನಾತಕ್ಕೆ ಬೇಸತ್ತು ಅಲ್ಲಿಂದ ಮುಖ್ಯಮಂತ್ರಿಯವರ ಕಚೇರಿಗೆ ಕಾರ್ಯಕ್ರವನ್ನು ಶಿಫ್ಟ್ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ