ಬೆಂಗಳೂರು, ಅ.14-ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಗರಿಕರ ಮನೆಬಾಗಿಲಿಗೆ ಸರ್ಕಾರದ ಸೇವೆಗಳನ್ನು ಒದಗಿಸುವ ಜನಸೇವಕ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2-3 ವಿಧಾನಸಭಾ ಕ್ಷೇತ್ರಗಳಿಗೆ ಸೇವೆಯನ್ನು ವಿಸ್ತರಣೆ ಮಾಡಲಾಗುವುದು ಸಕಾಲ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕರು ಜನಸೇವಕ ಸಹಾಯವಾಣಿ 080-44554455ಗೆ ಕರೆ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.ಕಾಲ್‍ಸೆಂಟರ್‍ಗೆ ಕರೆ ಮಾಡಿದಾಗ ಜನಸೇವಕರು ಮನೆ ಬಾಗಿಲಿಗೆ ಅವರು ಹೇಳಿದ ಸಮಯಕ್ಕೆ ಬಂದು ಅರ್ಜಿ ಸ್ವೀಕರಿಸಿ ಮತ್ತು ಸೇವೆಯನ್ನು ಒದಗಿಸಲಿದ್ದಾರೆ.ಇದಕ್ಕಾಗಿ 115 ರೂ.ಶುಲ್ಕ ಪಾವತಿಸಬೇಕಾಗುತ್ತದೆ.ಬೆಳಗ್ಗೆ 7 ರಿಂದ 8 ರವರೆಗೂ ಜನಸೇವಕರ ಸೇವೆ ದೊರೆಯಲಿದೆ.ಜನ ಸೇವಕರು ಟ್ಯಾಬ್‍ನೊಂದಿಗೆ ಮನೆಗೆ ಆಗಮಿಸಿ ದಾಖಲಾತಿ ಸ್ವೀಕರಿಸಿ ಥರ್ಮಲ್ ಪ್ರಿಂಟರ್ ಮೂಲಕ ಸ್ವೀಕೃತಿಯನ್ನು ಸ್ಥಳದಲ್ಲೇ ನೀಡುತ್ತಾರೆ. ಸರ್ಕಾರದ ಉದ್ದೇಶ ಕಚೇರಿಯಿಂದ ಕಚೇರಿಗೆ ಜನರನ್ನು ಅಲೆದಾಡುವುದನ್ನು ತಪ್ಪಿಸಿ, ಫೇಸ್‍ಲೆಸ್, ಪೇಪರ್‍ಲೆಸ್, ಕ್ಯಾಷ್‍ಲೆಸ್‍ನಂತೆ ಡಿಜಿಟಲ್ ಸೇವೆ ಒದಗಿಸುವುದೇ ಆಗಿದೆ ಎಂದರು.
ಆರಂಭದಲ್ಲಿ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಗುರುತಿನ ಚೀಟಿ ಸೇವೆಗಳು ದೊರೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸಲಾಗುತ್ತದೆ.ದಾಸರಹಳ್ಳಿ8 ವಾರ್ಡ್‍ಗಳಿಗೆ ತಲಾ ಒಬ್ಬರಂತೆ ಒಟ್ಟು 12 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.