ಕನ್ನಡಿಗರ ಮೇಲಿನ ದೌರ್ಜನ್ಯ-ಅ.16 ರಂದು ಬಾಣಸವಾಡಿಯ ಐಟಿಸಿ ಇನ್ಫೋಟೆಕ್ ಸಂಸ್ಥೆ ಮುಂದೆ ಬೃಹತ್ ಪ್ರತಿಭಟನೆ

ಬೆಂಗಳೂರು, ಅ.14-ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಇದೇ 16 ರಂದು ಬಾಣಸವಾಡಿಯ ಐಟಿಸಿ ಇನ್ಫೋಟೆಕ್ ಸಂಸ್ಥೆ ಮುಂದೆ ಬೆಳಗ್ಗೆ 11.30ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‍ಶೆಟ್ಟಿ ಬಣ) ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆಗೆ ಮುಂದಾದ ಸಂಸ್ಥೆಯ ಉದ್ಯೋಗಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಬೇರೆಲ್ಲೂ ಉದ್ಯೋಗ ಸಿಗದಂತೆ ಮಾಡಿರುವ ಅಮಾನವೀಯ ಕೃತ್ಯ ವಿರೋಧಿಸಿ ಕಂಪನಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮಲ್ಲೇನಹಳ್ಳಿಯ ನವೀನ್ ಎಂಬ ಯುವಕ ಐಟಿಸಿ ಇನ್ಫೋಟೆಕ್‍ನಲ್ಲಿ ಕೆಲಸ ನಿರ್ವಹಿಸಿ ದಕ್ಷತೆಯಿಂದಾಗಿ ಸೀನಿಯರ್ ಮ್ಯಾನೇಜರ್ ಹುದ್ದೆ ಅಲಂಕರಿಸಿದ್ದರು.ಈತ ಅತ್ಯುತ್ತಮ ಕೆಲಸಗಾರ ಎಂಬ ಕಾರಣಕ್ಕೆ ಹಲವಾರು ಪ್ರಶಸ್ತಿಗಳನ್ನೂ ಸಹ ಪಡೆದಿದ್ದ.ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಮುಂದಾಗಿದ್ದಕ್ಕೆ ಅವರನ್ನು ಕೆಲಸದಿಂದಲೇ ತೆಗೆದು ಹಾಕಿ ಕನ್ನಡಿಗರನ್ನು ಅವಮಾನಿಸಿರುವುದು ಅಲ್ಲದೆ, ಕನ್ನಡ ಧ್ವಜವನ್ನು ಹಾರಿಸಲು ಅವಕಾಶ ನೀಡದಿರುವುದು ಖಂಡನೀಯ ಎಂದರು.

ಈ ಹಿನ್ನೆಲೆಯಲ್ಲಿ ನವೀನ್ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾ.ರಾ.ಗೋವಿಂದು, ವೇದಿಕೆ ಅಧ್ಯಕ್ಷ ಟಿ.ಎನ್.ಶಿವಾನಂದ್ ನವೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ