ಚುನಾವಣಾ ಪ್ರಚಾರಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಹಾರಾಷ್ಟ್ರ ಪ್ರವಾಸ

ಬೆಂಗಳೂರು,ಅ.14- ಚುನಾವಣಾ ಪ್ರಚಾರಕ್ಕಾಗಿ  ನಾಳೆ ಹಾಗೂ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾರಾಷ್ಟ್ರ  ಪ್ರವಾಸ ಕೈಗೊಳ್ಳಲಿದ್ದಾರೆ.

ಈಗಾಗಲೇ ಇಂದಿನಿಂದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ  ಸಚಿವ  ಡಾ.ಅಶ್ವಥ್ ನಾರಾಯಣ ಮಹಾರಾಷ್ಟ್ರದ ಕೆಲವು ಕಡೆ ಪ್ರಚಾರಕ್ಕೆ ಧುಮುಕಿದ್ದಾರೆ.

ಇನ್ನು ನಾಳೆಯಿಂದ ಸಿಎಂ ಬಿಎಸ್‍ವೈ ಅವರು ಮಹಾರಾಷ್ಟ್ರದ ಅನೇಕ ಕಡೆ ಬಿಜೆಪಿ ಅಭ್ಯರ್ಥಿಗಳ ಪರ  ಪ್ರಚಾರ ನಡೆಸಲಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಲಿಂಗಾಯತ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ. ಲಿಂಗಾಯತ ಸಮುದಾಯದವರನ್ನು ಸೆಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ.

ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯಡಿಯೂರಪ್ಪ  ನಾಳೆಯಿಂದ ಮಹಾರಾಷ್ಟ್ರದಲ್ಲಿ ಎರಡು ದಿನಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಮಹಾರಾಷ್ಟ್ರದ 13 ಜಿಲ್ಲೆಗಳಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯ ಹೆಚ್ಚಿದ್ದು, ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ.ಸುಮಾರು 1.20 ಕೋಟಿ ಲಿಂಗಾಯತ ಮತದಾರರು ಮಹಾರಾಷ್ಟ್ರದಲ್ಲಿದ್ದಾರೆ.

ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಮುನ್ನ ಅನರ್ಹ ಶಾಸಕರಿಗೆ ಮುಂಬೈನಲ್ಲಿ ಆಶ್ರಯ ಕೊಡಲಾಗಿತ್ತು.ಈ ನಿಟ್ಟಿನಲ್ಲಿ ದೇವೇಂದ್ರ ಫಡ್ನವೀಸ್ ಪರ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಲು ಮುಂದಾಗಿದ್ದಾರೆ.

 

 

ಶಾಸಕರ ಸಮನ್ವಯಕ್ಕೆ ಅಡ್ಡಿಪಡಿಸುತ್ತಿರುವ ಆರೋಪದ ಹಿನ್ನೆಲೆ-ಅಧಿಕಾರಿಗಳ ಬದಲಾವಣೆಗೆ ಸಿಎಂ ಯಡಿಯೂರಪ್ಪ ನಿರ್ಧಾರ

ಬೆಂಗಳೂರು,ಅ.14-  ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರು, ಶಾಸಕರ ಸಮನ್ವಯಕ್ಕೆ ಅಡ್ಡಿಪಡಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಧಿಕಾರಿಗಳ ಬದಲಾವಣೆಗೆ ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಈಗಾಗಲೇ  ವಿ.ಪಿ.ಇಕ್ಕೇರಿ ಅವರನ್ನುಕಳೆದ ವಾರವಷ್ಟೇ ವರ್ಗಾವಣೆ ಮಾಡಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯದರ್ಶಿ ಶಿವಯೋಗಿ ಕಳಸದ್, ಜಂಟಿ ಕಾರ್ಯದರ್ಶಿ ಎಂ.ಕೆ.ಶ್ರೀರಂಗಯ್ಯ ಸೇರಿದಂತೆ ಮತ್ತಿತರರನ್ನು  ಎತ್ತಂಗಡಿ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಸಮಸ್ಯೆ ಹೇಳಿಕೊಂಡು ಬರುವ ಬಿಎಸ್‍ವೈ  ಈ ಆಪ್ತರು, ಶಾಸಕರು, ನಾಯಕರ ಅಹವಾಲುಗಳನ್ನು ಸರಿಯಾದ ರೀತಿಯಲ್ಲಿ ಸಿಎಂಗೆ ತಲುಪಿಸುತ್ತಿಲ್ಲ  ಎಂಬ ಆರೋಪ ಸಿಎಂ ಕಚೇರಿ, ನಿವಾಸದಲ್ಲಿನ ಸರ್ಕಾರಿ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಸಮಸ್ಯೆಗಳನ್ನು ಹೊತ್ತು ಸಿಎಂ ಮುಂದೆ ದೂರು ನೀಡಲು ಬರುವ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಸಿಎಂಗೆ ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ.

ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆಯಲ್ಲಿದ್ದಾಗ ಪಕ್ಷದ ಶಾಸಕರು ಸಿಎಂ ಭೇಟಿ ಮಾಡಲು ಬಂದಾಗಲೂ ಸರಿಯಾಗಿ ಸಿಎಂ ಜೊತೆ ಅಧಿಕಾರಿಗಳು ಸಂವಹನ ಮಾಡುತ್ತಿಲ್ಲ. ಈ ಕುರಿತು ಸಿಎಂ ಸುತ್ತಮುತ್ತಲಿರುವ ಅಧಿಕಾರಿಗಳ ಬಗ್ಗೆ ಪಕ್ಷದ ಶಾಸಕರು ಬಿಎಸ್‍ವೈಗೆ ದೂರು ನೀಡಿದ್ದಾರೆ.

ಸಿಬ್ಬಂದಿಯ ಈ ವರ್ತನೆಗೆ ಸಿಡಿಮಿಡಿಗೊಂಡಿರುವ ಬಿಎಸ್‍ವೈ, ತಮ್ಮ ಸುತ್ತಮುತ್ತಲಿನ ಸಿಬ್ಬಂದಿಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.ಸದ್ಯದಲ್ಲೇ ಹಾಲಿ ಸಿಬ್ಬಂದಿ ವರ್ಗಾವಣೆಗೊಳಿಸಿ ಬೇರೆ ಅಧಿಕಾರಿಗಳನ್ನು ಯಡಿಯೂರಪ್ಪ ನೇಮಿಸಿಕೊಳ್ಳಲಿದ್ದಾರೆ.ಸಿಎಂ ಕಚೇರಿ, ವಿಧಾನಸೌಧ ಹಾಗೂ ತಮ್ಮ ಅಧಿಕೃತ ನಿವಾಸದಲ್ಲಿನ ಸಿಬ್ಬಂದಿ ಬದಲಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ