ಬೆಂಗಳೂರು, ಅ.9-ನೆರೆ ಹಾವಳಿಯಿಂದ ಕೊಚ್ಚಿ ಹೋಗಿರುವ ನೀಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಹೇಳಿದರು.
ವಿಕಾಸಸೌಧದಲ್ಲಿ ನೆರೆಹಾವಳಿ ಸಂಭವಿಸಿದ ಪ್ರದೇಶಗಳ ಜಿಲ್ಲಾಧಿಕಾರಿಗಳು ಮತ್ತು ಡಿಡಿಪಿಐಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಯಾವ ಭಾಗಗಳಲ್ಲಿ ನೆರೆ ಹಾವಳಿಯಿಂದ ಸಂಪೂರ್ಣವಾಗಿ ಶಾಲಾ ಕಟ್ಟಡ ಕುಸಿದು ಹೋಗಿದೆಯೋ ಅಂತಹ ಕಡೆ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿ ಮಕ್ಕಳ ಶೈಕ್ಷಣಿಕ ಅಭ್ಯಾಸಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕೆಂದು ಸೂಚಿಸಿದರು.
ಸಂಪೂರ್ಣವಾಗಿ ಕಟ್ಟಡಗಳು ಕುಸಿದಿದ್ದರೆ ಬೇರೊಂದು ಕಡೆ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.ಭಾಗಶಃ ಹಾನಿಯಾಗಿದ್ದರೆ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಲಾಗುವುದು.ಯಾವುದೇ ಕಾರಣಕ್ಕೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳಾದ್ದಾಗಿದೆ ಎಂದು ಸುರೇಶ್‍ಕುಮಾರ್ ಹೇಳಿದರು.
ಕಳೆದ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹಾವೇರಿ, ಶಿರಸಿ, ವಿಜಯಪುರ, ಉತ್ತರ ಕನ್ನಡ, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಸೇರಿದಂತೆ ಇನ್ನಿತರ ಕಡೆ 392 ಶಾಲೆಗಳು ಹಾನಿಯಾಗಿವೆ.
ಇದರಲ್ಲಿ 93 ಶಾಲೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಪ್ರತಿ ಶಾಲೆಗೆ 15 ಲಕ್ಷ 75 ಸಾವಿರ ರೂ. ವೆಚ್ಚದಂತೆ ಒಟ್ಟು 93 ಶಾಲೆಗಳಿಗೆ 1464.75 ಕೋಟಿ ಹಣ ಬೇಕಾಗುತ್ತದೆ.414 ಶಾಲೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು, 1229.55 ಕೋಟಿ ವೆಚ್ಚವಾಗಲಿದೆ.ಭಾಗಶಃ ಹಾನಿಗೊಳಗಾಗಿರುವ 528 ಶಾಲೆಗಳಿಗೆ 871 ಕೋಟಿ, 240 ಶಾಲೆಗಳಲ್ಲಿ ಅಲ್ಪ ಪ್ರಮಾಣದ ಹಾನಿಯಾಗಿವೆ. ಇದಕ್ಕೆ 275.85 ಕೋಟಿ ವೆಚ್ಚವಾಗಲಿದೆ.ಒಟ್ಟು ನೆರೆ ಹಾವಳಿಯಿಂದ 3602.45 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಶಾಲಾ ಕಟ್ಟಡಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದೇವೆ. ಇದಕ್ಕೆ ಸಕಾರಾತ್ಮಕವಾದ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಎಲ್ಲೆಲ್ಲಿ ಸಂಪೂರ್ಣವಾಗಿ ಕಟ್ಟಡಗಳು ಕುಸಿದುಬಿದ್ದಿವೆಯೋ ಅಂತಹ ಕಡೆ ಸಮುದಾಯ ಭವನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.ಪಿಇಎಸ್ ಶಿಕ್ಷಣ ಸಂಸ್ಥೆಯವರು 10 ಶಾಲೆಗಳನ್ನು ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ.ಇದೇ ರೀತಿ ಚಿಕ್ಕಮಗಳೂರಿನಲ್ಲಿ ಕೆಲ ದಾನಿಗಳು ಶಾಲೆಗಳನ್ನು ನಿರ್ಮಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಎಲ್ಲೆಲ್ಲಿ ದಾನಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಮತ್ತಿತರರು ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದೆ ಬರುತ್ತಾರೋ ಅಂಥವರಿಗೆ ಸೂಕ್ತವಾದ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಶಾಲಾ ಕಟ್ಟಡ ಮತ್ತು ಆಸ್ಪತ್ರೆಗಳು ನಮ್ಮ ಮೊದಲ ಆದ್ಯತೆ ಎಂದರು.
ಇದೇ ತಿಂಗಳ ಅಂತ್ಯಕ್ಕೆ ನಾನು ಬೆಳಗಾವಿ, ಚಿಕ್ಕೋಡಿ, ಹಾವೇರಿ ಸೇರಿದಂತೆ ಮತ್ತಿತರ ಕಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿಯನ್ನು ಖುದ್ದು ಅಧ್ಯಯನ ಮಾಡುವುದಾಗಿ ಸುರೇಶ್‍ಕುಮಾರ್ ತಿಳಿಸಿದರು.
ಶೀಘ್ರದಲ್ಲೇ ಸಮವಸ್ತ್ರ ವಿತರಣೆ:
ಪ್ರತಿ ವರ್ಷದಂತೆ ಶೈಕ್ಷಣಿಕ ಅವಧಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಎರಡು ಜೊತೆ ಸಮವಸ್ತ್ರ ನೀಡಬೇಕು.ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಒಂದು ಜೊತೆಯನ್ನು ವಿತರಣೆ ಮಾಡಲಾಗಿತ್ತು.ಉಳಿದ ಒಂದು ಜೊತೆ ಸಮವಸ್ತ್ರವನ್ನು ವಿತರಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.ಆದಷ್ಟು ಶೀಘ್ರ ಬಾಕಿ ಇರುವ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು.ಈ ಬಗ್ಗೆ ಯಾರಿಗೂಯಾವುದೇ ರೀತಿಯ ಅನುಮಾನ ಬೇಡ ಎಂದು ಸಚಿವರು ಸ್ಪಷ್ಟಪಡಿಸಿದರು.