ಮೈಸೂರು, ಅ.9-ಈ ಬಾರಿಯ ದಸರಾ ಉತ್ಸವ ಯಶಸ್ವಿಯಾಗಿ ನಡೆದಿದ್ದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ದಸರೆಗೆ ದೇಶ-ವಿದೇಶಗಳಿಂದ ಹೆಚ್ಚಿನ ಜನ ಆಗಮಿಸಿದ್ದರು.ದಸರಾ ಮಹೋತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಜನ ಆಗಮಿಸಿದ್ದು, ವಿಶೇಷವಾಗಿತ್ತು. ಈ ಬಾರಿಯ ದಸರಾ ವ್ಯವಸ್ಥೆಗೆ ಮುಖ್ಯಮಂತ್ರಿ ಸೇರಿದಂತೆ ಜನಸಾಮಾನ್ಯರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಕಲಾವಿದರಾಗಲಿ, ಕಾರ್ಯಕ್ರಮಗಳಲ್ಲಾಗಲಿ ಯಾವುದೇ ತೊಂದರೆಯಾಗಲಿಲ್ಲ. ನಿಗದಿಯಂತೆ ಎಲ್ಲಾ ಕಾರ್ಯಕ್ರಮ ನಡೆದವು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೂರವಾಣಿ ಕರೆ ಮೂಲಕ ತಮ್ಮನ್ನು ಸಂಪರ್ಕಿಸಿ ದಸರಾ ಅತ್ಯುತ್ತಮವಾಗಿ ನೆರವೇರಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಕಲಾವಿದರು ಹಾಗೂ ಭಾಗವಹಿಸಿದವರಿಗೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಿ ಸಕಾಲಕ್ಕೆ ಅವರಿಗೆ ತಲುಪಿಸಲಾಗಿದೆ.
ವಿದೇಶಿಗರು ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಮುಂದಿನ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ ಎಂದರು.
ದಸರಾದ ಪ್ರತಿಯೊಂದು ಉಪಸಮಿತಿಯವರು ಉತ್ತಮ ಕೆಲಸ ನಿರ್ವಹಿಸಿದ್ದರಿಂದ ದಸರಾ ಯಶಸ್ವಿಗೆ ಕಾರಣವಾಯಿತು ಎಂದು ತಿಳಿಸಿದರು.
ದಸರಾಗೆ ನೇರವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ದಸರಾ ಖರ್ಚು-ವೆಚ್ಚದ ಬಗ್ಗೆ ಇನ್ನೊಂದು ವಾರದಲ್ಲಿ ವರದಿ ಸಿದ್ಧಪಡಿಸುವಂತೆ ಜಿಲ್ಲಾ ಉಪಸಮಿತಿಗಳಿಗೆ ಸೂಚಿಸಿದರು.
ಈ ಬಾರಿ ಪಾಸ್ ಬಗ್ಗೆ ಸದ್ಯಕ್ಕೆ ಏನು ಹೇಳುವ ಸ್ಥಿತಿಯಲ್ಲಿಲ್ಲ. ಮುಂದಿನ ಬಾರಿ ಅದನ್ನು ಸುವ್ಯವಸ್ಥೆಗೊಳಿಸುವುದಾಗಿ ಸೋಮಣ್ಣ ಹೇಳಿದರು.
ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಸೋಮಣ್ಣನವರು ಕಡಿಮೆ ಅವಧಿಯಲ್ಲಿಯೂ ಉತ್ತಮ ವ್ಯವಸ್ಥೆ ಮಾಡಿದ್ದಾರೆ.ಮಾಡಿರುವ ವ್ಯವಸ್ಥೆಗೆ ಸಿಎಂ ಸಹ ಶ್ಲಾಘಿಸಿದ್ದಾರೆ.ಮುಂದಿನ ವರ್ಷಗಳಲ್ಲಿ ಸೋಮಣ್ಣ ಅವರೇ ಜಿಲ್ಲಾ ಉಸ್ತುವಾರಿ ವಹಿಸಿರುತ್ತಾರೆ ಎಂದರು.