ಅಧಿವೇಶನ ಮುಗಿಯುವವರೆಗೂ ಜೆಡಿಎಸ್‍ನಿಂದ ಪ್ರತಿಭಟನೆ

ಬೆಂಗಳೂರು, ಅ.9-ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕ್ರಮ ಸಮರ್ಪಕವಾಗಿ ಕೈಗೊಂಡಿಲ್ಲ ಎಂದು ಆರೋಪಿಸಿ ನಾಳೆಯಿಂದ ವಿಧಾನಮಂಡಲದ  ಅಧಿವೇಶನ ಮುಗಿಯುವವರೆಗೂ ಜೆಡಿಎಸ್ ಪ್ರತಿಭಟನೆ ನಡೆಸಲಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.ನಾಳೆ ಶೇಷಾದ್ರಿ ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿಯಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ಪಾದಯಾತ್ರೆ ನಡೆಸಿ ರಾಜ್ಯಸರ್ಕಾರದ ಗಮನ ಸೆಳೆಯಲು ಉದ್ದೇಶಿಸಲಾಗಿದೆ.

ಪಾದಯಾತ್ರೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಉಂಟಾಗಿದ್ದು, ರಾಜ್ಯ ಸರ್ಕಾರ ಪರಿಹಾರ  ಕಾರ್ಯವನ್ನು ಸಮರ್ಪಕವಾಗಿ ಕೈಗೊಂಡಿಲ್ಲ. ಹಿಂದೆಂದೂ ಕಾಣದಂತಹ ಭೀಕರ ಪ್ರವಾಹ ಉಂಟಾಗಿದ್ದರೂ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿಲ್ಲ.  ತುರ್ತು ಪರಿಹಾರ ನೀಡಲು ಮೀನಾಮೇಷ ಎಣಿಸಿತು.

ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ 1200 ಕೋಟಿ ರೂ.ಏನೇನೂ ಸಾಲುವುದಿಲ್ಲ. ಕನಿಷ್ಠ 10 ಸಾವಿರ ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಬೇಕೆಂದು ಈಗಾಗಲೇ ಜೆಡಿಎಸ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಡೆಸುತ್ತಿರುವ  ಪ್ರತಿಭಟನೆ ಇದಾಗಿದ್ದು, ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಜೆಡಿಎಸ್‍ನ ಶಾಸಕರು ನೆರೆ ಹಾವಳಿ, ಬರ, ರೈತರ ಸಾಲ ಮನ್ನಾ, ಋಣಮುಕ್ತ ಕಾಯ್ದೆ ಅನುಷ್ಠಾನ, ಬಡವರ ಬಂಧು ಮೊದಲಾದ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಸದನದ ಹೊರಗೆ ಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಆಡಳಿತ ವೈಖರಿಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಮನವರಿಕೆ ಮಾಡಿಕೊಡಲು ಜೆಡಿಎಸ್ ಉದ್ದೇಶಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ಕಳೆದುಕೊಂಡಿರುವವರಿಗೆ ತಕ್ಷಣ ಸೂರು ಕಲ್ಪಿಸಿಲ್ಲ. ಸಾಕಷ್ಟು ಬೆಳೆ ಹಾನಿಯಾಗಿದ್ದರೂ ಪರಿಹಾರವಿಲ್ಲ. ರಸ್ತೆ, ಸೇತುವೆ ಸೇರಿದಂತೆ   ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೂ ತುರ್ತಾಗಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸುತ್ತಿದ್ದು, ಇದೇ ವಿಚಾರವನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ  ಶಾಸಕರು ಹಾಗೂ ಮುಖಂಡರ ಸಭೆ

ನಾಳೆಯಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಹಾಗೂ ಜೆಡಿಎಸ್ ನಡೆಸಲಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ಪಕ್ಷದ  ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದರು.

ಜೆ.ಪಿ.ಭವನದಲ್ಲಿಂದು ಸಭೆ ನಡೆಸಿ ಅಧಿವೇಶನದಲ್ಲಿ ಪಕ್ಷದ ವತಿಯಿಂದ ಕೈಗೊಳ್ಳಬೇಕಾಗಿರುವ ಹೋರಾಟದ ವಿಚಾರಗಳ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.  ಹಾಗೆಯೇ ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರೊಂದಿಗೆ ನಾಳೆ ನಡೆಸಲಿರುವ  ಪ್ರತಿಭಟನೆ ಬಗ್ಗೆಯೂ ಚರ್ಚಿಸಿದರು.

ಸದನದ ಒಳ-ಹೊರಗೆ ಪಕ್ಷ ನಡೆಸುವ ಹೋರಾಟದ ರೂಪುರೇಷೆ ಹಾಗೂ ಪೂರ್ವಸಿದ್ಧತೆ ಸಂಬಂಧಿಸಿದಂತೆ ಕುಮಾರಸ್ವಾಮಿ ಶಾಸಕರು ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ಮಾಡಿದರು.

ಜೊತೆಗೆ ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಗಳ ಬಗ್ಗೆಯೂ ಸಮಾಲೋಚನೆ ನಡೆಸಿ ಏಕಾಂಗಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬೇಕಾದ ಕಾರ್ಯತಂತ್ರ ರೂಪಿಸುವುದು ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ