ಬೆಂಗಳೂರು, ಅ.9-ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ನಾನೇ ಸ್ಪರ್ಧಿಸುತ್ತೇನೆ. ಶರತ್ ಬಚ್ಚೇಗೌಡ ಅವರು ಯಾವ ಪಕ್ಷದಿಂದ ಬೇಕಾದರೂ ಸ್ಪರ್ಧಿಸಲಿ, ಎದುರಿಸಲು ಸಜ್ಜಾಗಿದ್ದೇನೆ ಎಂದು ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಹೇಳಿದರು.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಚ್ಚೇಗೌಡ ಅವರ ಮನೆಗೆ ಹೋಗಿ ಮನವೊಲಿಕೆ ಮಾಡುವ ಅಗತ್ಯ ನನಗಿಲ್ಲ. ನಾನು ಅವರನ್ನು ಭೇಟಿ ಮಾಡುವುದಿಲ್ಲ. ಅವರನ್ನು ಸಮಾಧಾನ ಮಾಡಲು ಅವರ ಪಕ್ಷದ ನಾಯಕರಿದ್ದಾರೆ.ನಾನು ಮೂರು ಬಾರಿ ಶಾಸಕನಾಗಿದ್ದವನು.ಜನರ ನಾಡಿ ಮಿಡಿತ ಚೆನ್ನಾಗಿ ಗೊತ್ತಿದೆ. ಚುನಾವಣೆ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದೇನೆ ಎಂದು ಹೇಳಿದರು.
ಶರತ್ ಬಚ್ಚೇಗೌಡ ಪಕ್ಷೇತರರಾಗಿಯಾದರೂ ಸ್ಪರ್ಧಿಸಲಿ ಅಥವಾ ಬೇರೆ ಪಕ್ಷದಿಂದಲಾದರೂ ಸ್ಪರ್ಧಿಸಲಿ ನನಗೆ ಚಿಂತೆ ಇಲ್ಲ. ನಾನು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ. ಮತ್ತೊಮ್ಮೆ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.
ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದವನು. ಹಣ ಹಂಚಿ ಗೆಲ್ಲುವುದು ನನ್ನ ಅಭ್ಯಾಸವಲ್ಲ. ನಿನ್ನೆ ಹೊಸಕೋಟೆಯಲ್ಲಿ ಶಾಸಕ ಕೃಷ್ಣಭೆರೇಗೌಡ ಅವರು ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ 2 ಸಾವಿರ ರೂ. ಕೊಟ್ಟರೆ, ನಾವು 4 ಸಾವಿರ ಕೊಡುತ್ತೇವೆ ಎಂದಿದ್ದಾರೆ.ಅವರಿಗೆ ಅಧಿಕಾರ ಕಳೆದುಕೊಂಡು ಬುದ್ಧಿ ಭ್ರಮಣೆಯಾಗಿದೆ.ಹಣ ಕೊಟ್ಟು ಗೆಲ್ಲುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದರು.
ಕಾಂಗ್ರೆಸ್ ಯಾರನ್ನು ಬೇಕಾದರೂ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿ ನಮ್ಮ ಅಭ್ಯಂತರವಿಲ್ಲ. ನಾವು ಕಾಂಗ್ರೆಸ್ ಪಕ್ಷವನ್ನು ಬಿಟ್ಟಿದ್ದೇವೆ. ನಮಗೂ, ಆ ಪಕ್ಷದ ಬೆಳವಣಿಗೆಗಳಿಗೂ ನಮಗೆ ಸಂಬಂಧವಿಲ್ಲ. ಈ ಹಿಂದೆ ಸಿದ್ದರಾಮಯ್ಯ ನಮ್ಮ ನಾಯಕರಾಗಿದ್ದರು, ಆದರೆ ಈಗಿಲ್ಲ.ಅ.22ರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಾವು ನಮ್ಮ ನಾಯಕ ಯಾರು ಎಂದು ಹೇಳುತ್ತೇವೆ ಎಂದರು.
ಅನರ್ಹರಾಗಿರುವ 17 ಮಂದಿ ಶಾಸಕರಲ್ಲೂ ಒಗ್ಗಟ್ಟಿದೆ.ಈ ಮೊದಲಿನಂತೆಯೇ ನಾವು ಒಟ್ಟಾಗಿದ್ದೇವೆ. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಚರ್ಚಿಸಿಯೇ ಒಟ್ಟಾಗಿ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಬಿಜೆಪಿ ರಾಜಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರನ್ನು ನಾನು ಭೇಟಿ ಮಾಡಿದ್ದೆ ಎಂಬುದು ತಪ್ಪು ಮಾಹಿತಿ. ನಾನು ಅವರನ್ನು ಭೇಟಿ ಮಾಡಿಯೇ ಇಲ್ಲ. ಯಾರು ಭೇಟಿಯಾಗಿದ್ದರು ಎಂಬುದು ಗೊತ್ತಿಲ್ಲ ಎಂದು ಹೇಳಿದರು.