ಬೆಂಗಳೂರು,ಅ.9- ಅದೃಷ್ಟದ ನಿವಾಸ ರೇಸ್ಕೋರ್ಸ್ ರಸ್ತೆಯ ರೇಸ್ ವ್ಯೂ (ಕಾಟೇಜ್-2)ಗಾಗಿ ಕಾದು ಕುಳಿತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಕಾವೇರಿ ನಿವಾಸಕ್ಕಾಗಿ ಮತ್ತೆ ಕಾಯುವಂತಾಗಿದೆ.
ವಿಜಯ ದಶಮಿ ಸಂದರ್ಭದಲ್ಲಿ ಸರ್ಕಾರಿ ನಿವಾಸಕ್ಕೆ ಪೂಜೆ ಸಲ್ಲಿಸಿ ಅಧಿಕೃತ ಪ್ರವೇಶ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಚಳಿಗಾಲದ ಅಧಿವೇಶನದ ನಂತರ ಸರ್ಕಾರಿ ನಿವಾಸಕ್ಕೆ ಆಗಮಿಸಲು ನಿರ್ಧರಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಲಾಗಿತ್ತು. ಆ ವೇಳೆ ಸಿಎಂಗೆ ತಮ್ಮ ಅದೃಷ್ಟದ ನಿವಾಸವನ್ನೇ ನೀಡಲಾಗಿತ್ತು. ಆದರೆ ಮಾಜಿ ಸಚಿವ ಸಾ.ರಾ.ಮಹೇಶ್ ನಿವಾಸ ತೆರವಿಗೆ ವಿಳಂಬ ಮಾಡಿದ್ದರಿಂದ ಅದೃಷ್ಟದ ನಿವಾಸ ಕಣ್ಣ ಮುಂದಿದ್ದರೂ ಪ್ರವೇಶಕ್ಕೆ ಕಾಯಬೇಕಾಗಿತ್ತು.
ಸಾ.ರಾ.ಮಹೇಶ್ ನಿವಾಸ ತೆರವು ಮಾಡಿದ ನಂತರ ರೇಸ್ ಕೋರ್ಸ್ ನಿವಾಸವನ್ನು ಸಿಎಂ ವಾಸ್ತವ್ಯಕ್ಕೆ ತಕ್ಕ ರೀತಿ ಸಿದ್ಧಗೊಳಿಸಲಾಗಿತ್ತು.ಇನ್ನೇನು ವಿಜಯದಶಮಿ ವೇಳೆ ರೇಸ್ ವ್ಯೂ ನಿವಾಸಕ್ಕೆ ಆಗಮಿಸಲಿದ್ದಾರೆ ಎನ್ನುವಷ್ಟರಲ್ಲೇ ಸಿಎಂ ನಿಲುವು ಬದಲಿಸಿ ಅದೃಷ್ಟದ ನಿವಾಸದ ಬದಲು ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾವೇರಿ ನಿವಾಸವನ್ನು ಮಂಜೂರು ಮಾಡಿಸಿಕೊಂಡರು.
ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಕಾವೇರಿ ನಿವಾಸ ಮಂಜೂರಾಗಿತ್ತು.ಜಾರ್ಜ್ ಹೆಸರಿನಲ್ಲೇ ಸಿದ್ದರಾಮಯ್ಯ ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಜಾರ್ಜ್ ನಿವಾಸ ಖಾಲಿ ಮಾಡುವುದಾಗಿ ಹೇಳಿರುವ ಹಿನ್ನೆಲೆ ಈ ನಿವಾಸವನ್ನು ಸಿಎಂಗೆ ಮಂಜೂರು ಮಾಡಲಾಗಿದೆ.
ಸದ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿವಾಸದಲ್ಲಿ ವಾಸ್ತವ್ಯ ಹೂಡಿರುವ ಕಾರಣಕ್ಕೆ ಮತ್ತಷ್ಟು ದಿನ ಬಿಎಸ್ವೈ ಕಾವೇರಿಗಾಗಿ ಕಾಯಬೇಕಿದೆ.ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರೆ ಅವರಿಗೆ ಬೇರೊಂದು ಸರ್ಕಾರಿ ನಿವಾಸ ಮಂಜೂರು ಮಾಡಿ, ವಾಸ್ತವ್ಯ ಬದಲಿಸುವಂತೆ ಮಾಡಬೇಕು.
ಇಲ್ಲವೇ ಬೇರೊಬ್ಬರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಸಿಕ್ಕರೆ ಅವರಿಗೆ ನಿವಾಸ ಹಂಚಿಕೆ ಮಾಡಿ, ಸಿದ್ದರಾಮಯ್ಯನವರನ್ನು ಖಾಲಿ ಮಾಡಿಸಬೇಕು.ಇದೆಲ್ಲವೂ ಚಳಿಗಾಲದ ಅಧಿವೇಶನದಲ್ಲಿ ಅಂತಿಮವಾಗಲಿದೆ.
ಇದಕ್ಕೂ ಮೊದಲೇ ಒತ್ತಾಯದಿಂದ ನಿವಾಸ ಖಾಲಿ ಮಾಡಿಸಿದರೆ ಸೇಡಿನ ರಾಜಕಾರಣ ಎಂಬ ಅಪವಾದ ಸುತ್ತಿಕೊಳ್ಳಲಿದೆ ಎಂಬ ಕಾರಣಕ್ಕೆ ಯಡಿಯೂರಪ್ಪ ಚಳಿಗಾಲದ ಅಧಿವೇಶನದ ನಂತರವೇ ಕಾವೇರಿಯಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.