ನಾಳೆಯಿಂದ ಚಳಿಗಾಲದ ಅಧಿವೇಶನ-ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ

ಬೆಂಗಳೂರು,ಅ.9- ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ  ಸರ್ಕಾರದ ವೈಫಲ್ಯ, ಹಣ ಬಿಡುಗಡೆಗೆ ಕೇಂದ್ರದಿಂದ ವಿಳಂಬ, ಹಣಕಾಸಿನ ಪರಿಸ್ಥಿತಿ,  ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸೇರಿದಂತೆ ಇತ್ತೀಚಿನ ವಿದ್ಯಮಾನಗಳು ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿವೆ.

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಕೇಂದ್ರ ಸರ್ಕಾರ 1,200 ಕೋಟಿ ರೂ. ನೆರವು ನೀಡಿರುವುದು ರಾಜ್ಯ ಸರ್ಕಾರಕ್ಕೆ ಧೈರ್ಯ ತಂದುಕೊಟ್ಟಿದ್ದು, ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಇದನ್ನೇ ಮುಂದಿಟ್ಟುಕೊಂಡು  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಸಮರ್ಥಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ.

ಅಧಿವೇಶನದಲ್ಲಿ ನೆರೆ-ಬರ, ರೈತರ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆ ಅನುಷ್ಠಾನ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೂರು ದಿನಗಳು ಸಾಲುವುದಿಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು. ಹೀಗಾಗಿ ಕನಿಷ್ಠ ಒಂದು ವಾರ ವಿಸ್ತರಿಸಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಒತ್ತಾಯಿಸಿವೆ.

ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದರೆ ಬಜೆಟ್ ಅನುಮೋದನೆ ಅಥವಾ ಲೇಖಾನುದಾನಕ್ಕೆ ಒಪ್ಪಿಗೆ ಪಡೆದು ಎರಡು ದಿನಗಳಿಗೆ ಅಧಿವೇಶನ ಬರ್ಖಾಸ್ತುಗೊಳಿಸಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಹಿಂದಿನ ಅಧಿವೇಶನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ, ಯಡಿಯೂರಪ್ಪ ವಿಶ್ವಾಸಮತ ಸಾಬೀತು, ಹೊಸ ಸರ್ಕಾರ ರಚನೆ ಗಡಿಬಿಡಿ, ಲೇಖಾನುದಾನಕ್ಕೆ ಒಪ್ಪಿಗೆಗೆ ಸೀಮಿತವಾಗಿ ಸಮಾಪ್ತಿಯಾಗಿತ್ತು.

ಕಳೆದ ಹಲವು ವರ್ಷಗಳಿಂದ ಚಳಿಗಾಲದ ಅಧಿವೇಶನವನ್ನು ಗಡಿಜಿಲ್ಲೆ ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಸಲಾಗುತ್ತಿತ್ತು.ಆದರೆ, ನೆರೆಹಾವಳಿಗೆ ಬಹುತೇಕ ಉತ್ತರ ಕರ್ನಾಟಕ ನಷ್ಟಕ್ಕೆ ಒಳಗಾಗಿದೆ.ಈ ಭಾಗದಲ್ಲಿ ಅಧಿವೇಶನ ನಡೆಸಿದರೆ, ಸಾರ್ವಜನಿಕರು ಹಾಗೂ ರೈತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಸರ್ಕಾರ ಇದೇ ಮೊದಲ ಬಾರಿಗೆ ಈ ಸಂಪ್ರದಾಯವನ್ನು ಮುರಿದು ಬೆಂಗಳೂರಿನಲ್ಲೇ ಮೂರು ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಿದೆ.

ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣ:

ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ 10 ದಿನಗಳ ಕಾಲ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರದ ಮೂಲಕ ಆಗ್ರಹಿಸಿದ್ದರು.ಆದರೆ ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿಲ್ಲ.

ಉತ್ತರಕರ್ನಾಟಕದಲ್ಲಿ  ಉಂಟಾದ ನೆರೆಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು ಪ್ರತಿಭಟನೆಯ ಭಯದಿಂದ ಈ ಅಧಿವೇಶನವನ್ನು ವಿಧಾನಸೌಧಕ್ಕೆ ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಅಧಿವೇಶನದ ಮೊದಲ ದಿನವಾದ ನಾಳೆ ಬೃಹತ್ ಪ್ರತಿಭಟನೆ ನಡೆಸಲು ಜೆಡಿಎಸ್ ತೀರ್ಮಾನಿಸಿದೆ.ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಯಲಿದೆ.

22 ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲಿವೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವ ವಿಚಾರವೂ ಬಿಸಿ-ಬಿಸಿ ಚರ್ಚೆಗೆ ಕಾರಣವಾಗಲಿದೆ.

ಈ ಅಧಿವೇಶನದಲ್ಲಿ ಬಜೆಟ್ ಅನುಮೋದನೆ ಪಡೆಯಬೇಕಾಗಿದೆ.ಕೇವಲ ಮೂರು ದಿನ ಅಧಿವೇಶನ ನಡೆಸಿ ಬಜೆಟ್‍ಗೂ ಒಪ್ಪಿಗೆ ಪಡೆಯುವುದು ಸರಿಯಲ್ಲ. ಪ್ರಸಕ್ತ ಸಾಲಿನ ಆಯವ್ಯಯದ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆಯಾಗಿಲ್ಲ. ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆಸಿ ಸರ್ಕಾರದಿಂದ ಉತ್ತರ ಪಡೆಯಬೇಕಿದೆ.

ನೆರೆ ಪೀಡಿತ ಪ್ರದೇಶಗಳಲ್ಲಿ ಸಮರ್ಪಕ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಈಗಾಗಲೇ ಪ್ರತಿಪಕ್ಷಗಳು ಪ್ರತಿಭಟಿಸಿ ಸರ್ಕಾರದ ಗಮನ ಸೆಳೆದಿವೆ. ಇದೇ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಕೂಡ ಕನಿಷ್ಠ ಎರಡು ವಾರಗಳ ಕಾಲ ಅಧಿವೇಶನ ನಡೆಸುವಂತೆ ಸರ್ಕಾರವನ್ನು ಕೋರಿದ್ದರು.

ವಿಧಾನ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸದನದ ಕಾರ್ಯ-ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಸಭಾನಾಯಕರು, ಪ್ರತಿಪಕ್ಷಗಳ ನಾಯಕರು ಭಾಗವಹಿಸಲಿದ್ದು, ಆಗ ಅಧಿವೇಶನ ನಿಗದಿಯಂತೆ ನಡೆಸುವುದು, ಇಲ್ಲವೆ ಅವಧಿ ವಿಸ್ತರಿಸುವ ಕುರಿತು ಚರ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ತಂತ್ರಕ್ಕೆ ಪ್ರತಿತಂತ್ರ:

ಪ್ರವಾಹ ಪರಿಹಾರ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧಗಳು ರಣತಂತ್ರ ಹೆಣೆಯುತ್ತಿವೆ. ಆದರೆ, ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಅಂಕಿಅಂಶಗಳ ಸಹಿತ ಉತ್ತರ ನೀಡಲು ಸಿಎಂ ಯಡಿಯೂರಪ್ಪ ದಾಖಲೆಗಳೊಂದಿಗೆ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಇಂದು ಸಂಜೆ 4 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರ ಸಭೆ ಕರೆದಿರುವ ಯಡಿಯೂರಪ್ಪ ಪ್ರವಾಹ ಪರಿಹಾರ ಕಾರ್ಯಗಳು, ಇಲಾಖಾವಾರು ಪ್ರಗತಿ, ತೆರಿಗೆ ಸಂಗ್ರಹ ಕುರಿತು ಅಂಕಿಅಂಶಗಳನ್ನು ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನೂ ಸರ್ಕಾರದ ಬೊಕ್ಕಸ ಖಾಲಿಯಾಗಿರುವ ವಿಚಾರವನ್ನೂ ಮುಂದಿಟ್ಟು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧಪಕ್ಷಗಳು ನಿರ್ಧರಿಸಿವೆ. ಹೀಗಾಗಿ ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ ಎಂದು ಅಂಕಿಅಂಶಗಳ ಸಮೇತ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರಿಸಲು ಯಡಿಯೂರಪ್ಪ ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ, ಎಚ್.ಕೆ.ಪಾಟೀಲ್, ಆರ್. ವಿ. ದೇಶಪಾಂಡೆ, ರಾಮಲಿಂಗಾ ರೆಡ್ಡಿ, ರಮೇಶ್ ಕುಮಾರ್ ಸೇರಿದಂತೆ ಅನೇಕ ಹಿರಿಯ ನಾಯಕರು ಪ್ರತಿಪಕ್ಷದ ಸಾಲಿನಲ್ಲಿಇರುತ್ತಾರೆ.ಆದ್ದರಿಂದ, ನಿಯಮಾವಳಿಗಳನ್ವಯ ಸದನವನ್ನು ನಡೆಸುವುದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮೊದಲ ಸವಾಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ