ಬೆಂಗಳೂರು: ಕಳೆದ ಮೂರು–ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆ ಆಗುತ್ತಿದೆ. ನಿನ್ನೆ ಸಂಜೆಯಿಂದ ರಾತ್ರಿಯವರೆಗೂ ನಗರದ ಪೂರ್ವ, ಮಧ್ಯ ಮತ್ತು ಉತ್ತರ ಬೆಂಗಳೂರು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿತ್ತು.
ಇಂದಿರಾನಗರದಲ್ಲಿ ಎರಡು ಮರ, ಬಾಣಸವಾಡಿ ಕಲ್ಯಾಣನಗರದಲ್ಲಿ 1 ಹಾಗೂ ಬೇಗೂರಿನ ವಿಶ್ವಪ್ರಿಯ ಲೇಔಟ್ನಲ್ಲಿ ಮರ ಬಿದ್ದ ಪರಿಣಾಮ ಜನರು ಪರದಾಡುವಂತಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಬಿಬಿಎಂಪಿ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಿದರು.
ಈ ನಡುವೆ ಬಿಬಿಎಂಪಿ ಅಧಿಕಾರಿ ವಿರುದ್ದ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಗರಂ ಆದರು. ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಧಿಕಾರಿ, ಸಿಬ್ಬಂದಿಗಳಿಗೆ ಕೆಲಸದ ಬಗ್ಗೆ ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ಅರಣ್ಯ ವಿಭಾಗದ ಅಧಿಕಾರಿ ಇಲ್ಲದೇ ಇರುವುದನ್ನು ಕಂಡು ಮೇಯರ್ ಗೌತಮ್ ಕುಮಾರ್ ಬಿಬಿಎಂಪಿ ಕಂಟ್ರೋಲ್ ರೂಮಿನಲ್ಲಿ ಕುಳಿತು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಇನ್ನು ಇಂದು ಬೆಳಗ್ಗೆಯಿಂದ ನಗರದಲ್ಲಿ ಮೋಡ ಮುಸಿಕದ ವಾತಾವರಣ ಇದೆ. ಸಣ್ಣ ಪ್ರಮಾಣದಲ್ಲಿ ಇಬ್ಬನಿ ಕೂಡ ಬೀಳುತ್ತಿದೆ. ಸಂಜೆ ವೇಳೆಗೆ ಭಾರೀ ಮಳೆ ಆಗಲಿದೆ. ರಾತ್ರಿ ಕೂಡ ಗುಡುಗು-ಮಿಂಚು ಸಹಿತ ವರುಣ ಅಬ್ಬರಿಸಲಿದ್ದಾನೆ.
ಬೆಂಗಳೂರಿನಲ್ಲಿ ಇನ್ನೂ ಕೆಲವು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆಯಂತೆ. ಬೆಳಗ್ಗೆ ಬಿಸಿಲು ಕಾಣಿಸಿಕೊಂಡರೂ ಸಂಜೆ ವೇಳೆಗೆ ಮಳೆ ಆಗುವ ಸಾಧ್ಯತೆ ಹೆಚ್ಚಿದೆ.
ನಿನ್ನೆ ಶುಕ್ರವಾರ ರಾತ್ರಿ ನಗರಾದ್ಯಂತ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಿತ್ತು. ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು. ಇದೇ ರೀತಿ ಇಂದು ಕೂಡ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ.