ಬೆಂಗಳೂರು,ಅ.4- ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿವಾಳಿ ಸರ್ಕಾರ ಎಂದು ಟೀಕಿಸಿದ್ದಾರೆ. ಇದಕ್ಕೆ ಅಷ್ಟೇ ಕಠೋರವಾಗಿ ತಿರುಗೇಟು ನೀಡಿರುವ ಬಿಜೆಪಿ, ರಾಜ್ಯದ ಆರ್ಥಿಕ ದಿವಾಳಿಗೆ ಈ ಹಿಂದೆ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದೆ.
ನೆರೆ ಸಂತ್ರಸ್ತರಿಗೆ ನೆರವು ನೀಡಲು ಆರ್ಥಿಕ ಸಮಸ್ಯೆ ಇದೆ.ಕೇಂದ್ರ ಸರ್ಕಾರದಿಂದ ನೆರವು ಸಿಕ್ಕಿಲ್ಲ ಎಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
ಇದನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ, ನಿಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣ ಕೂಡ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ನಿಮಗಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ. ನಿಮ್ಮ ಅಸಮರ್ಥಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ.
ಬಿಜೆಪಿಯ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿ ಕೊಡುತ್ತೀರಿ. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ ನರೇಂದ್ರ ಮೋದಿ ಸರ್ಕಾರಕ್ಕೆ ಇಲ್ಲ. ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ರಾಜ್ಯ ಸರ್ಕಾರಕ್ಕೂ ಇಲ್ಲ. ಆರ್ಥಿಕವಾಗಿ ಮಾತ್ರವಲ್ಲ. ಬೌದ್ದಿಕವಾಗಿಯೂ ನಿಮ್ಮ ಸರ್ಕಾರಗಳು ದಿವಾಳಿಯಾಗಿವೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಜ್ಯದ ಬೊಕ್ಕಸಕ್ಕೆ ಖಾಲಿಯಾಗಲು ಯಾರು ಕಾರಣ ಸಿದ್ದರಾಮಯ್ಯ ಎಂದು ಪ್ರಶ್ನಿಸಿದೆ. ಐದು ವರ್ಷ ಸ್ವತಂತ್ರವಾಗಿ ಸರ್ಕಾರ ನಡೆಸಿದ್ದು,ನಂತರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿ ಮಾಡಿದ್ದೇ ಇಂದಿನ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನರಿಗೆ ತಿಳಿದಿದೆ ಎಂದು ಆರೋಪಿಸಿದೆ.
ಮಾನ್ಯ ಯಡಿಯೂರಪ್ಪನವರ ಸರ್ಕಾರ ನೆರೆಪೀಡಿತ ಪ್ರದೇಶಗಳಲ್ಲಿ ತಕ್ಷಣದ ಪರಿಹಾರದ ಕಾರ್ಯಗಳನ್ನು ಕೈಗೊಂಡಿದೆ. ವಿಪಕ್ಷ ನಾಯಕನ ನೇಮಕವೂ ಮಾಡಿಕೊಳ್ಳದೆ ನಿಮ್ಮ ಒಳಬೇಗುದಿಗೆ ಪರಿಹಾರದ ವಿಷಯವಾಗಿ ನಿರಂತರ ಕೇಂದ್ರದ ಸಂಪರ್ಕದಲ್ಲಿರುವ ನಮ್ಮ ಸಂಸದರನ್ನು ಟೀಕಿಸಲು ಸಮಯ ಮೀಸಲಿಡುವ ಬದಲು ಕಾಂಗ್ರೆಸ್ನಲ್ಲಿರುವ ಒಬ್ಬ ಸಂಸದರನ್ನಾದರೂ ಸಂಸದರನ್ನಾಗಿಯೇ ಉಳಿಸಿಕೊಳ್ಳಲು ಪ್ರಯತ್ನ ಪಡಿ ಎಂದು ಟ್ವೀಟ್ ಮಾಡಿದೆ.
ಈ ಮಧ್ಯೆ ಕಾಂಗ್ರೆಸ್ ರಾಜ್ಯ ಸರ್ಕಾರ ಸಲ್ಲಿಸಿದ್ದ ನೆರೆ ನಷ್ಟ ಅಂದಾಜು ವರದಿಯನ್ನು ಕೇಂದ್ರ ಸರ್ಕಾರಕ್ಕೆ ತಿರಸ್ಕರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನೆರೆಹಾವಳಿಯಿಂದ ರಾಜ್ಯದ 23 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.ಜನರ ಬದುಕು ಬೀದಿಗೆ ಬಿದ್ದಿದೆ. ಕಷ್ಟದಲ್ಲಿರುವವರ ಕಣ್ಣೊರೆಸುವ ಬದಲಾಗಿ ಆಡಳಿತ ಮತ್ತು ಪ್ರತಿಪಕ್ಷಗಳು ರಾಜಕೀಯ ಮೇಲಾಟದಲ್ಲೇ ಮುಳುಗಿದೆ.ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿವೆ ಎಂಬ ಆಕ್ರೋಶ ಜನಸಾಮಾನ್ಯರ ಕೇಳಿಬರುತ್ತಿದೆ.