ಕೆಟ್ಟ ಭಾಷೆಯಲ್ಲಿ ನಮಗೂ ಟೀಕೆ ಮಾಡಲು ಬರುತ್ತದೆ-ಶಾಸಕಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಅ.4-ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನೀಡುತ್ತಿರುವ ಅಸಂಬದ್ಧ ಹೇಳಿಕೆಗಳನ್ನು ತಕ್ಷಣವೇ ನಿಲ್ಲಿಸದಿದ್ದರೆ ಅದಕ್ಕಿಂತ ಕೆಟ್ಟ ಭಾಷೆಯಲ್ಲಿ ನಮಗೂ ಟೀಕೆ ಮಾಡಲು ಬರುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವಾರಗಳಿಂದ ಕಾಂಗ್ರೆಸ್, ಜೆಡಿಎಸ್ ನಾಯಕರು ಅಧಿಕಾರ ಇಲ್ಲದ ಹತಾಶೆಯಿಂದ ಕೀಳುಮಟ್ಟದ ಭಾಷೆ ಬಳಸಿ ಮಾತನಾಡಿದ್ದಾರೆ.ಕೂಡಲೇ ನಿಮ್ಮ ಬಾಯಿಗೆ ಬೀಗ ಹಾಕದಿದ್ದರೆ ಅದಕ್ಕಿಂತಲೂ ಕೆಟ್ಟ ಭಾಷೆಯಲ್ಲಿ ಮಾತನಾಡಲು ನಮಗೂ ಬರುತ್ತದೆ ಎಂದು ಗುಡುಗಿದರು.

ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಇವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು.ರಾಜಕೀಯದಲ್ಲಿ ಟೀಕೆ ಮಾಡಲು ಇತಿಮಿತಿಗಳಿರುತ್ತವೆ. ತೀರಾ ಪುಕ್ಕಟೆ ಪ್ರಚಾರ ಸಿಗುತ್ತದೆ ಎಂದು ಮನಬಂದಂತೆ ಟೀಕೆ ಮಾಡಿದರೆ ಯಾರೊಬ್ಬರೂಸಹಿಸುವುದಿಲ್ಲ.

ನಮ್ಮ ತಾಳ್ಮೆಗೂ ಮಿತಿಯಿದೆ.ಅದನ್ನು ಪರೀಕ್ಷಿಸಿದರೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್‍ನ ಸಿ.ಎಂ.ಇಬ್ರಾಹಿಂ ಎಂತಹ ಅಯೋಗ್ಯ ರಾಜಕಾರಣಿ ಎಂಬುದು ಇಡೀ ದೇಶಕ್ಕೆ ಗೊತ್ತಿದೆ.ನೀವು ಮೋದಿ ಮತ್ತು ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೆ ದೊqಡ್ಡವರಾಗುವುದಿಲ್ಲ. ಇದೇ ರೀತಿ ಟೀಕಿಸುತ್ತಾ ಹೋದರೆ ನಿಮ್ಮ ಚರಿತ್ರೆಯನ್ನು ಜನತೆ ಮುಂದಿಡಬೇಕಾಗುತ್ತದೆ.ಜನತಾ ಪರಿವಾರದಲ್ಲಿದ್ದಾಗ ಇಂದಿರಾಗಾಂಧಿ, ಸೋನಿಯಾಗಾಂಧಿ ವಿರುದ್ಧ ಎಂತಹ ಪದ ಬಳಕೆ ಮಾಡಿದ್ದೀರಿ, ಕೊನೆಗೆ ಅವರ ಕೈಕಾಲು ಹಿಡಿದುಕೊಂಡೇ ಕಾಂಗ್ರೆಸ್ ಸೇರ್ಪಡೆಯಾಗಿದ್ದೀರಿ. ಮೋದಿಯವರ ಬಗ್ಗೆಯಾಗಲಿ, ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವ ಯೋಗ್ಯತೆ ನಿಮಗಿದೆಯೇ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಹುಚ್ಚಾಸ್ಪತ್ರೆಯಲ್ಲಿರಬೇಕಾಗಿತ್ತು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಒಂದೂ ಬಾರಿಯೂ ಜಿಲ್ಲೆಗೆ ಭೇಟಿ ನೀಡಲಿಲ್ಲ. ಗೂಟದ ಕಾರು ಹೋಗಿ ಅಧಿಕಾರ ಕಳೆದುಕೊಂಡಿದ್ದರಿಂದ  ಮನಬಂದಂತೆ ಮಾತನಾಡುತ್ತಿದ್ದಾರೆ. ಇದೇ ರೀತಿ ಮಾತನಾಡಿದರೆ ಅದೇ ಧಾಟಿಯಲ್ಲಿ ನಾವೂ ಕೂಡ ಉತ್ತರ ನೀಡಬೇಕಾಗುತ್ತದೆ.ನಿಮ್ಮಂಥ ಅಯೋಗ್ಯರು ಸಾರ್ವಜನಿಕ ಜೀವನದಲ್ಲಿರುವುದು ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.

ಖಜಾನೆ ಲೂಟಿ:

ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ಖಜಾನೆಯನ್ನು ಲೂಟಿ ಮಾಡಲಾಗಿತ್ತು.ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂಪನ್ಮೂಲಗಳನ್ನು ಕ್ರೋಢೀಕರಣಕ್ಕೆ ಒತ್ತು ಕೊಟ್ಟಿದ್ದಾರೆ.ಪರಿಣಾಮ ಅಭಿವೃದ್ಧೀ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ ಎಂದು ಹೇಳಿದರು.

ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗದಿದ್ದರೂ ರಾಜ್ಯ ಸರ್ಕಾರ ಎಲ್ಲಿಯೂ ಕೂಡ ಪರಿಹಾರ ಕಾರ್ಯ ವಿಳಂಬ ಮಾಡದೆ ಪರಿಹಾರ ಕಾರ್ಯ ಕೈಗೊಂಡಿದೆ. ಮುಖ್ಯಮಂತ್ರಿ ಸೇರಿದಂತೆ ಸಂಪುಟದ  ಎಲ್ಲ ಸಹೋದ್ಯೋಗಿಗಳು ತಮ್ಮ  ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಪರಿಹಾರ ಕಾರ್ಯಕ್ಕೆ ಹಣಕಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಬೊಕ್ಕಸದಲ್ಲಿ ಎಷ್ಟು ಹಣವನ್ನು ಸಂಗ್ರಹಿಸಿಟ್ಟಿದ್ದರು ಎಂಬುದನ್ನು ಸಾರ್ವಜನಿಕವಾಗಿ ಹೇಳಲಿ.ನಿಮ್ಮ ಯೋಗ್ಯತೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಅಂಥದ್ದರಲ್ಲಿ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಹರಿಹಾಯ್ದರು.

ಕೇಂದ್ರ ಸಚಿವರು ಹಾಗೂ ಸಂಸದರು ಹಾದಿಬೀದಿಯಲ್ಲಿ ಚರ್ಚೆ ಮಾಡುವುದು ಬೇಡ.ರಾಜ್ಯಕ್ಕೆ ಪರಿಹಾರ ನೀಡುವಂತೆ  ಪ್ರಧಾನಿಗೆ ಮತ್ತೊಮ್ಮೆ ಮನವರಿಕೆ ಮಾಡಿ. ಪರಸ್ಪರ ಟೀಕೆ ಮಾಡುವುದರಿಂದ ಯಾರೂ ದೊಡ್ಡವರಾಗುವುದಿಲ್ಲ. ರಾಜ್ಯಕ್ಕೆ ಏನು ಬೇಕೋ ಅದನ್ನು ತರಲು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಸಲಹೆ ಮಾಡಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ