ರಾಜಕಾಲುವೆಗಳ ಕಾಮಗಾರಿಗಳಲ್ಲಿ ಅವ್ಯವಹಾರ-ತನಿಖೆ ನಡೆಸಲು ಸಿಎಂ ಯಡಿಯೂರಪ್ಪ ಸೂಚನೆ

Varta Mitra News

ಬೆಂಗಳೂರು,ಅ.4- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ ) ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಪುನಶ್ಚೇತನಗೊಳಿಸುವ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.

2016-17 ಹಾಗೂ 2018-19ರ ಸಾಲಿನಲ್ಲಿ ರಾಜಕಾಲುವೆಯ ಹೂಳನ್ನು ತೆಗೆಯಲು ನಡೆದ ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕ್ಯಾಪ್ಟನ್ ದೊಡ್ಡಿಹಾಳ್ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

ಎರಡು ತಿಂಗಳೊಳಗೆ ತನಿಖೆ ನಡೆಸಿ  ಮುಖ್ಯಮಂತ್ರಿಗೆ ವರದಿ ಸಲ್ಲಿಸಬೇಕು. ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಲಾಗಿದೆ.

2016-17ನೇ ಸಾಲಿನಲ್ಲಿ  ರಾಜಕಾಲುವೆಯನ್ನು ಪುನಶ್ಚೇತನಗೊಳಿಸಲು ಒಟ್ಟು 6 ಪ್ಯಾಕೇಜ್‍ಗಳ ಮೂಲಕ 800 ಕೋಟಿ ಹಾಗೂ 2018-19ರ ಸಾಲಿನಲ್ಲಿ ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯದಲ್ಲಿ ಭಾರೀ ಪ್ರಮಾಣದ ಗೋಲ್‍ಮಾಲ್  ನಡೆದಿದೆ ಎಂಬ ಆರೋಪಗಳು ಕೇಳಿಬಂದಿತ್ತು.

ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ಮಾಡಿದೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ವೈಟ್‍ಟಾಪಿಂಗ್‍ನಲ್ಲೂ ಗೋಲ್‍ಮಾಲ್ ನಡೆದಿದೆ  ಎಂಬ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ಕೊಟ್ಟಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಕೆಲವು ಕಾಮಗಾರಿಗಳಲ್ಲಿ  ಅವ್ಯವಹಾರ ನಡೆದಿದೆ ಎಂಬ ಹಿನ್ನೆಲೆಯಲ್ಲಿ  ಸರ್ಕಾರ ಈಗಾಗಲೇ ತನಿಖೆಗೆ  ಆದೇಶ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ