ಬೆಳಗಾವಿ,ಅ.4- ಎಕರೆಗೆ ಒಂದು ಲಕ್ಷ ರೂ. ಪರಿಹಾರ ಕೊಡಿ ಎಂದು ಕೇಳಿದ ಸಂತ್ರಸ್ತ ರೈತರಿಗೆ ಉಡಾಫೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಂದು 100 ಎಕರೆ ಜಮೀನಿದೆ, ಪರಿಹಾರ ಕೊಟ್ಟರೆ 1 ಕೋಟಿ ರೂ.ಆಗುತ್ತೆ.ಅದನ್ನು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ರಾತ್ರಿ ಪ್ರವಾಹ ಪರಿಹಾರ ವಿತರಣೆ ಪರಿಶೀಲನೆ ಸಭೆಗೆ ಬಂದಿದ್ದ ರೈತರು ಪರಿಹಾರವನ್ನು ಎಕರೆಗೆ ಐವತ್ತು ಸಾವಿರದಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದರು.ಈ ವೇಳೆ ಪ್ರತಿಕ್ರಿಯಿಸಿದ ಸಿಎಂ ರಾಜ್ಯದ ಖಜಾನೆಯಲ್ಲಿ ಹಣವಿಲ್ಲ; ನಾವೇನೂ ಮಾಡಲು ಆಗಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ಬರುವವರೆಗೂ ಕಾಯಿರಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.
ಸಿಎಂ ಅವರ ಉತ್ತರಕ್ಕೆ ಆಕ್ರೋಶಗೊಂಡ ರೈತ ಮುಖಂಡರು ವಿರೋಧ ಮಾಡಿದಾಗ ಅಡ್ಡ ಬಂದ ಡಿಸಿಎಂ ಲಕ್ಷ್ಮಣ ಸವದಿ, ನನ್ನದು ನೂರು ಎಕರೆ ಜಮೀನು ಇದೆ.ಅಷ್ಟಕ್ಕೂ ಪರಿಹಾರ ನೀಡಿದರೆ ಒಂದು ಕೋಟಿ ಆಗುತ್ತೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಮೊದಲೇ ಮನೆ, ಮಠ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು ಸಂಕಷ್ಟಕ್ಕೀಡಾಗಿ ಸರ್ಕಾರದ ಮುಂದೆ ನೆರವಿನ ಹಸ್ತ ಚಾಚಿದ್ದಾರೆ.ಈ ಸಂದರ್ಭದಲ್ಲಿ ಸಂತೈಸಬೇಕಾದವರು ಉಡಾಫೆಯ ಉತ್ತರ ನೀಡಿದ್ದಾರೆ.
ರಾಜ್ಯದ ಉಪಮುಖ್ಯಮಂತ್ರಿ, ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮನಬಂದಂತೆ ಮಾತನಾಡುವುದು ಎಷ್ಟು ಸಮಂಜಸ ಎಂದು ಸಂತ್ರಸ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದಾಗ ಪ್ರವಾಹ ಸಂತ್ರಸ್ತರು ಮುತ್ತಿಗೆ ಹಾಕಿ ಪರಿಹಾರಕ್ಕೆ ಆಗ್ರಹಿಸಿದ ಸಂದರ್ಭದಲ್ಲಿ ಈಗಾಗಲೇ 10 ಸಾವಿರ ರೂ.ನೀಡಲಾಗಿದೆ.ಅದನ್ನು ಕೊಟ್ಟಿದ್ದೇ ಹೆಚ್ಚು ಎಂದು ದರ್ಪ ಮೆರೆದಿದ್ದರು.
ಇತ್ತ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ನೆರವಿನ ಅಗತ್ಯವಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದರು.ರಾಜ್ಯದ 25 ಬಿಜೆಪಿ ಸಂಸದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಹಲವು ರೀತಿಯ ಹೇಳಿಕೆ ನೀಡಿ ತೇಪೆ ಹಾಕುವ ಪ್ರಯತ್ನ ಮಾಡಿದ್ದರಾದರೂ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರವಾಗಲಿ ಮುಂದೆ ಬಂದಿಲ್ಲ.