
ಬೆಂಗಳೂರು,ಅ.4-ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ಮುಂದುವರೆಸಿರುವುದು ದುರದೃಷ್ಟಕರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರ ನೆರವು ಕೋರಿದಂತೆಯೂ ಇರಬೇಕು, ಕೇಂದ್ರ ಸರ್ಕಾರ ಕೊಡದಂತೆಯೂ ಇರಬೇಕು ಎಂಬ ತಂತ್ರ ಅನುಸರಿಸಿದಂತೆ ಇದೆ ಎಂದು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ಕೋರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ ವರದಿ ತಿರಸ್ಕøತವಾಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯಡಿಯೂರಪ್ಪನವರಿಗೆ ಸಾಕಷ್ಟು ಅನುಭವವಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಕಾನೂನು ರೀತಿ ಮನವಿ ಸಲ್ಲಿಸಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದ ಸಮಸ್ಯೆಗೆ ಸ್ಪಂದಿಸುವ ಇರಾದೆ ಇಲ್ಲ. ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಬಹುದಿತ್ತು. ಆನಂತರ ಲೆಕ್ಕಚಾರ ಮಾಡಬಹುದಿತ್ತು.ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯನ್ನು ಅಧಿಕಾರಿಗಳೇ ಮಾಡಿದ್ದಾರೆ.
ಕೇಂದ್ರದ ಅಧ್ಯಯನ ತಂಡದಲ್ಲೂ ಅಧಿಕಾರಿಗಳು ಇದ್ದರು. ಆದರೂ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಕೇಂದ್ರದಿಂದ ಪರಿಹಾರ ಹಣ ತರುವಲ್ಲಿ ರಾಜ್ಯ ಸರ್ಕಾರ ಅಸಹಾಯಕ ಸ್ಥಿತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಈ ಧೋರಣೆಯನ್ನು ವಿರೋಧಿಸಿ ಅ.10ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಅಲ್ಲದ ವಾಸ್ತವ ಸಂಗತಿಗಳನ್ನು ಜನರ ಮುಂದಿಡಲಿದೆ ಎಂದು ಹೇಳಿದರು.