ಬೆಂಗಳೂರು,ಅ.4- ಪ್ರವಾಹದಿಂದ ನೆಲ ಕಚ್ಚಿದ ಮನೆಗಳೆಲ್ಲಾ 5 ಲಕ್ಷ ರೂ. ಬೆಲೆ ಬಾಳುತ್ತಿದ್ದವೇ ಎಂಬುದನ್ನು ಪ್ರಮಾಣೀಕರಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದು ಸಂತ್ರಸ್ತರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಹದಿಂದ ಮನೆ, ಮಠ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿರುವ ಸಂತ್ರಸ್ತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ಈಗ ಮೌಲ್ಯಮಾಪನಕ್ಕೆ ಮುಂದಾಗಿದೆ.ಬಿದ್ದು ಕೊಚ್ಚಿ ಹೋಗಿರುವ ಮನೆಗಳು 5 ಲಕ್ಷ ರೂ.ಬೆಲೆ ಬಾಳುತ್ತವೆಯೇ ಎಂದು ಪ್ರಶ್ನಿಸಿದೆ.
ಹಾಗಾದರೆ ಹೆಚ್ಚು ಬೆಲೆ ಬಾಳುವ ಮನೆಗಳು ಬಿದ್ದು ಹೋಗಿದ್ದಾರೆ. ಸರ್ಕಾರ ಅದಕ್ಕೆ ಹೆಚ್ಚು ಪರಿಹಾರ ನೀಡುತ್ತದೆಯೇ?ಸರ್ಕಾರ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಬೇಕು, ಇಲ್ಲ ಮನೆ ಕಟ್ಟಿಕೊಳ್ಳಲು ಇಂತಿಷ್ಟು ಪರಿಹಾರ ನೀಡಬೇಕು.ಆದರೆ ಬಿದ್ದ ಮನೆಗಳು ಐದು ಲಕ್ಷ ಬೆಲೆ ಬಾಳುತ್ತವೆಯೇ?ಎರಡು ಲಕ್ಷ ಬಾಳುತ್ತವೆಯೇ?ಎಂದು ಕೇಳಿರುವುದು ಎಷ್ಟು ಸಮಂಜಸ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸರ್ಕಾರದ ಲೆಕ್ಕದ ಪ್ರಕಾರ 80ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.2000ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಹಾಗಾದರೆ ಇವರಿಗೆಲ್ಲ ಯಾವ ರೀತಿ ಮೌಲ್ಯವನ್ನು ಸರ್ಕಾರ ನಿಗದಿ ಮಾಡುತ್ತದೆ.ಸತ್ತವರು 5 ಲಕ್ಷಕ್ಕೆ ಬಾಳುತ್ತಾರೆಯೇ ಎಂದು ಕೇಳುತ್ತದೆಯೇ? ಬಸ್, ರೈಲು ಅಪಘಾತ ದಂತಹ ಘಟನೆಗಳು ನಡೆದಾಗ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುತ್ತದೆ. ಆದರೆ ಅವರು ಇಂತಿಷ್ಟು ಬೆಲೆ ಬಾಳುತ್ತಾರೆಯೇ ಎಂದು ನಿಗದಿ ಮಾಡಿ ಘೋಷಿಸುತ್ತದೆಯೇ?ಅವಲಂಬಿತ ಕುಟುಂಬದವರು ದಿಕ್ಕೆಟ್ಟು ಹೋದ ಪರಿಸ್ಥಿತಿಯನ್ನು ನಿಭಾಯಿಸಲು, ದುಃಖದ ನೋವನ್ನು ತಾತ್ಕಾಲಿಕವಾಗಿ ಉಪಶಮನ ಮಾಡುವ ಹಿನ್ನಲೆಯಲ್ಲಿ ಪರಿಹಾರವನ್ನು ಸರ್ಕಾರಗಳು ನೀಡುತ್ತವೆ. ಇದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ.ಯಾವುದೇ ಕಟ್ಟಡಗಳ ದುರಂತ, ಅಗ್ನಿ ಅನಾಹುತಗಳು ಸಂಭವಿಸಿದಾಗ ಸಾವು ನೋವಿಗೆ ಸ್ಪಂದಿಸುವ ಸರ್ಕಾರ ಪರಿಹಾರವನ್ನು ನೀಡುತ್ತದೆ.ಆದರೆ ಅವರ ಬೆಲೆ ಕಟ್ಟುವುದಿಲ್ಲ.
ವಿಪರ್ಯಾಸವೆಂದರೆ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆ ಮತ್ತು ಪ್ರವಾಹಕ್ಕೆ ಬಿದ್ದ ಮನೆಗಳು ಐದು ಲಕ್ಷ ಬಾಳುತ್ತವೆಯೇ ಎಂಬುದನ್ನು ಪ್ರಮಾಣೀಕರಿಸಿ ಎಂದು ಕೇಳಿರುವುದು ಯಕ್ಷ ಪ್ರಶ್ನೆಯಾಗಿದೆ.
ಕೆಲವರು ಗುಡಿಸಿಲಿನಲ್ಲಿ ವಾಸ ಮಾಡುತ್ತಿರುತ್ತಾರೆ.ಮತ್ತೆ ಕೆಲವರು ಮಹಲಿನಲ್ಲಿ ವಾಸವಿರುತ್ತಾರೆ.ಪ್ರಕೃತಿ ವಿಕೋಪಕ್ಕೆ ಈ ಇಬ್ಬರು ಸಂಕಷ್ಟಕ್ಕೀಡಾದಾಗ ಪರಿಹಾರವನ್ನು ಯಾವ ರೂಪದಲ್ಲಿ ಸರ್ಕಾರ ಕೊಡಬೇಕು.ಬಿದ್ದ ಮನೆಗಳ ಮೌಲ್ಯಮಾಪನದ ಆಧಾರದ ಮೇಲೆ ಕೊಡುತ್ತದೆಯೇ ಅಥವಾ ಇಂತಿಷ್ಟು ಪರಿಹಾರ ಎಂದು ನಿಗದಿ ಮಾಡುತ್ತದೆಯೇ?ಇಲ್ಲವೇ ತಾವೇ ಮುಂದೆ ನಿಂತು ಮನೆಗಳನ್ನು ಕಟ್ಟಿಕೊಡುತ್ತದೆಯೇ?ಯಾವುದೂ ಸ್ಪಷ್ಟನೆ ಇಲ್ಲ. ರಾಜ್ಯ ಸರ್ಕಾರ ಭೀಕರ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಉತ್ತರಕರ್ನಾಟಕ ಭಾಗದಲ್ಲಿ ಉಂಟಾದ ಹಾನಿಯ ಬಗ್ಗೆ ಕೊಟ್ಟಿರುವ ವರದಿ, ಕೇಂದ್ರ ನಡೆಸಿರುವ ಅಧ್ಯಯನಕ್ಕೆ ತಾಳೆಯಾಗದಿರಬಹುದು.ಇದನ್ನು ಅಧಿಕಾರಿಗಳು ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು.ಆದರೆ ತಮ್ಮದಲ್ಲದ ತಪ್ಪಿಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನ ಬೀದಿಪಾಲಾಗಿ ಇಂದಿಗೂ ಶಾಲೆಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ಬದುಕು ದೂಡುತ್ತಿದ್ದಾರೆ.
ಬರಿಯ ಮನೆ, ಮಠಗಳನ್ನಷ್ಟೇ ಅಲ್ಲ; ಇಡೀ ಬದುಕೇ ನೀರಿನಲ್ಲಿ ಕೊಚ್ಚಿ ಹೋಗಿದೆ.ಮುಂದಿನ ಭವಿಷ್ಯದ ಚಿಂತೆ ಅವರನ್ನು ಕಾಡುತ್ತಿದೆ.ಪರಿಹಾರದ ಹಣದಿಂದಲೇ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯವೇ? ಕೇವಲ 5 ಲಕ್ಷ ರೂ.ನಿಂದ ಒಂದಿಡೀ ಸಂಸಾರ ಮತ್ತೆ ಮರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೇ?
ಪ್ರವಾಹದಲ್ಲಿ ತಮ್ಮೆಲ್ಲ ಕನಸುಗಳನ್ನು ನುಚ್ಚು ನೂರಾಗಿಸಿಕೊಂಡು, ಇದೀಗ ತುತ್ತು ಅನ್ನಕ್ಕೂ ಕೈ ಚಾಚಬೇಕಾದ ದೈನೇಸಿ ಸ್ಥಿತಿಗೆ ಬೆಲೆ ಕಟ್ಟುವವರಾರು?ಅವರ ನೋವಿಗೆ ಎಲ್ಲಿಯ ಬೆಲೆ?ಪ್ರಕೃತಿ ವಿಕೋಪದಿಂದ ಉಂಟಾದ ಈ ನಷ್ಟವನ್ನು ಬರಿಯ ಹಣದಿಂದ ಲೆಕ್ಕ ಹಾಕಲಾಗದು.ಇದು ಮಾನವೀಯ ನೆಲೆಗಟ್ಟಿನಲ್ಲಿ ಚಿಂತಿಸಬೇಕಾದ ವಿಚಾರ.
ಇದನ್ನೆ ಮರೆತಿರುವ ಕೇಂದ್ರ ಸರ್ಕಾರ ಜನರ ನೋವನ್ನೂ ಲೆಕ್ಕದಲ್ಲಿ ಅಂದಾಜಿಸುತ್ತಿರುವುದು ದುರಂತವಲ್ಲದೇ ಮತ್ತೇನೂ ಅಲ್ಲ.