ಬಿಬಿಎಂಪಿ ಭ್ರಷ್ಟರ ಸಂತೆಯಾಗಿದೆ-ಸಿಎಂ ಯಡಿಯೂರಪ್ಪ

ಬೆಂಗಳೂರು,ಅ.4- ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳನ್ನು ಪುನಶ್ಚೇತನಗೊಳಿಸುವ 2016-17ರ  6 ಪ್ಯಾಕೇಜ್‍ಗಳ 800 ಕೋಟಿ ರೂ.  ಕಾಮಗಾರಿಗಳ ಅವ್ಯವಹಾರ, 18-19ನೇ ಸಾಲಿನ  29 ಕೋಟಿ ರೂ. ವೆಚ್ಚ  ರಾಜಕಾಲುವೆಗಳ   ಹೂಳೆತ್ತುವ ಕಾರ್ಯದಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದು ಹಗರಣದ ತನಿಖೆಯನ್ನು ಟಿವಿಸಿಸಿಗೆ ವಹಿಸಿ ಮೇಯರ್ ಗೌತಮ್ ಕುಮಾರ್ ಜೈನ್ ಕೂಡ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.

ಈ ಅಕ್ರಮ, ಅವ್ಯವಹಾರಗಳ ಬಗ್ಗೆ ನಿನ್ನೆಯಷ್ಟೆ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಪ್ರತಿಕಾಗೋಷ್ಟಿ ನಡೆಸಿ ರಾಜಕಾಲುವೆಗಳ ಅಭಿವೃದ್ಧಿ ಮತ್ತು ಹೂಳೆತ್ತುವ ಕಾರ್ಯದ ಹೆಸರಿನಲ್ಲಿ ನೂರಾರು ಕೋಟಿ ರೂ. ಹಗರಣ ನಡೆದಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರಲ್ಲದೆ ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದರು.

ಮನವಿ ಸಲ್ಲಿಸಿದ 24ಗಂಟೆಯೊಳಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತನಿಖೆಗೆ ಆದೇಶ ನೀಡಿದ್ದಾರೆ.ರಾಜಕಾಲುವೆಗಳ ಪುನಶ್ಚೇತನ ಹಾಗೂ ಪುನರ್‍ನಿರ್ಮಾಣ 800 ಕೋಟಿ ರೂ. ವೆಚ್ಚ ಕಾಮಗಾರಿ ಹಗರಣ ಮತ್ತು ಹೂಳು ತೆಗೆಯುವ 29 ಕೋಟಿ ರೂ.ಕಾಮಗಾರಿಯಲ್ಲಿ ನಡೆದಿರುವ ವ್ಯಾಪಕ ಅಕ್ರಮದ ಬಗ್ಗೆ ಕ್ಯಾಪ್ಟನ್ ದೊಡ್ಡಿಹಾಳ ನೇತೃತ್ವದ ತಂಡದಿಂದ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ಮೇಯರ್   ಗೌತಮ್‍ಕುಮಾರ್ ಜೈನ್ ಅವರು ರಾಜಕಾಲುವೆ ಹಗರಣವನ್ನು  ಸಮಗ್ರ ತನಿಖೆ ನಡೆಸುವಂತೆ  ಟಿವಿಸಿಸಿಗೆ  ವಹಿಸಿದ್ದಾರೆ.   ತಮ್ಮ ಕಚೇರಿ ಪೂಜೆಯಾದ ನಂತರ  ಸಹಿ ಹಾಕಿದ ಮೊದಲ ಕಡತವೇ ಇದಾಗಿರುವುದು ವಿಶೇಷವಾಗಿದೆ. ಕಳೆದೆರಡು ದಿನಗಳ ಹಿಂದೆಯಷ್ಟೇ ನೂತನ ಮೇಯರ್ ಗೌತಮ್ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಬಿಬಿಎಂಪಿ ಭ್ರಷ್ಟರ ಸಂತೆಯಾಗಿದೆ.ಇದನ್ನು ಮಟ್ಟ ಹಾಕಬೇಕಾಗಿದೆ.ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದರು.ಇಂದು ಕಚೇರಿಗೆ ಆಗಮಿಸಿದ ಮೇಯರ್ ಅವರು ಅಕ್ರಮಗಳ ತನಿಖೆಯ ಮೊದಲ ಕಡತಕ್ಕೆ ಸಹಿ ಹಾಕುವ ಮೂಲಕ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ