
ನವದೆಹಲಿ,ಅ.4- ಅಕ್ರಮ ಹಣ ವರ್ಗಾವಣೆ ಮತ್ತು ಹವಾಲ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಆರಂಭಿಸಿದ್ದಾರೆ.
ನ್ಯಾಯಾಲಯದ ಸೂಚನೆ ಮೇರೆಗೆ ಇಂದು ಬೆಳಗ್ಗೆ 9.30ಕ್ಕೆ ತಿಹಾರ್ ಜೈಲು ತಲುಪಿದ ಇಡಿ ಅಧಿಕಾರಿಗಳು ಹವಾಲ ಹಗರಣ, ದೆಹಲಿ ಫ್ಲಾಟ್ನಲ್ಲಿ ದೊರೆತ ಕೋಟ್ಯಂತರ ಹಣ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಿ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ನಾಳೆಯೂ ಸಹ ಇಡಿ ಅಧಿಕಾರಿಗಳು ವಿಚಾರಣೆ ಮುಂದುವರೆಸಿ ಇವರಿಗೆ ಲಭಿಸದೆ ಇರುವ ಕೆಲವು ಮಾಹಿತಿಗಳನ್ನು ಪಡೆಯಲಿದ್ದಾರೆ.
ಇಂದು ಮತ್ತು ನಾಳೆ ಬೆಳಗ್ಗೆ10ರಿಂದ ಮಧ್ಯಾಹ್ನ 3 ಗಂಟೆವರೆಗೆ ಶಿವಕುಮಾರ್ ಅವರ ವಿಚಾರಣೆ ನಡೆಸಲು ಸಿಬಿಐ ವಿಶೇಷ ನ್ಯಾಯಾಲಯ ಇಡಿಗೆ ಅವಕಾಶ ನೀಡಿತ್ತು.
ಸೆ.4ರಿಂದ ಇಡಿ ಕಸ್ಟಡಿಯಲ್ಲಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಸೆ.14ರಿಂದ ಸೆ.17ರವರೆಗೆ ಅವರ ಅನಾರೋಗ್ಯದ ಕಾರಣ ವಿಚಾರಣೆ ನಡೆಸಲು ಸಾದ್ಯವಾಗಿರಲಿಲ್ಲ. ಸೆ.17ಕ್ಕೆ ಇಡಿ ಕಸ್ಟಡಿ ಮುಗಿದ ಬಳಿಕ ಅವರನ್ನು ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇಡಿ ಕಸ್ಟಡಿಯಲ್ಲಿದ್ದ ನಾಲ್ಕು ದಿನ ಡಿಕೆಶಿ ಅವರ ಅನಾರೋಗ್ಯದ ಕಾರಣ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನ್ಯಾಯಾಂಗ ಬಂಧನದಲ್ಲೇ ವಿಚಾರಣೆಗೆ ನ್ಯಾಯಾಲಯ ಅವಕಾಶ ನೀಡಿದೆ.
ಅತ್ತ ಡಿ.ಕೆ.ಶಿವಕುಮಾರ್ ಅವರ ಸಹೋದರ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಸಹ ಇಂದು ದೆಹಲಿಯ ಖಾನ್ ಮಾರ್ಕೆಟ್ ಪ್ರದೇಶದಲ್ಲಿರುವ ಲೋಕನಾಯಕ್ ಭವನದ ಇಡಿ ಕೇಂದ್ರ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು.
ಇಡಿ ಸಮನ್ಸ್ ಹಿನ್ನೆಲೆಯಲ್ಲಿ ನಿನ್ನೆ ಕೂಡ ಸುರೇಶ್ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಐದು ಗಂಟೆಗಳ ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿತ್ತು.
ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ಕೂಡ ಇತ್ತೀಚೆಗೆ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ದೆಹಲಿಯಲ್ಲಿ ವಿಚಾರಣೆಗೊಳಪಡಿಸಿದ್ದರು.