ಔರಾದ್ಕರ್ ವರದಿ ಜಾರಿ ಮಾಡುವ ಬಗ್ಗೆ ಸಿಎಂ ಜೊತೆ ಸಮಾಲೋಚನೆ-ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಅ.4- ಉತ್ತರ ಕರ್ನಾಟಕದ  ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜಧಾನಿಗೆ ಮರಳಿದ ನಂತರ ಹಿರಿಯ ಐಪಿಎಸ್ ಅಧಿಕಾರಿ  ರಾಘವೇಂದ್ರ ಔರಾದ್ಕರ್ ವರದಿ ಜಾರಿ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಆಯೋಗದ ವರದಿ, ಔರಾದ್ಕರ್ ವರದಿ ಅಂಶಗಳ ಹಾಗೂ ವೇತನ ಶ್ರೇಣಿಗಳಲ್ಲಿನ ಗೊಂದಲಗಳನ್ನು ಬಗೆಹರಿಸುವ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ಕ್ರಮಕೈಗೊಳ್ಳಲಾಗುವುದು

ಹಣಕಾಸು ಇಲಾಖೆ ಅಭಿಪ್ರಾಯ ಪಡೆದು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವಂತೆ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆಯನ್ನು ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.

ವೇತನ ಶ್ರೇಣಿಗೆ ಸಂಬಂಧಿಸಿದಂತೆ ಇರುವ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಪರಿಶೀಲನೆ ನಡೆಸಿ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ ಎಂದರು.

ಸ್ಪಷ್ಟೀಕರಣ ಸಹಜ:

ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಇನ್ನೊಂದು ವಾರದಲ್ಲಿ  ಸಭೆ ನಡೆದು ಕೇಂದ್ರದಿಂದ ಪರಿಹಾರ ದೊರೆಯಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಎನ್‍ಡಿಆರ್‍ಎಫ್ ಮಾರ್ಗಸೂಚಿ  ಪ್ರಕಾರ ಧನ ಬಿಡುಗಡೆಯಾಗಲಿದೆ. ರಾಜ್ಯ ಸರ್ಕಾರ ನೀಡಿದ ಮನವಿ  ಪತ್ರದಲ್ಲಿನ ಅಂಶಕ್ಕೂ ಕೇಂದ್ರದ ಅಧ್ಯಯನ ತಂಡ ನೀಡಿರುವ ವರದಿಯಲ್ಲಿ  ವ್ಯತ್ಯಾಸವಿರಬಹುದು. ಆದರೆ ಸ್ಪಷ್ಟೀಕರಣ ಕೇಳುವುದು ಸಹಜ.ಅದಕ್ಕೆ ಅನ್ಯರ್ಥ ಕಲ್ಪಿಸುವುದು ಬೇಡ.

ಪ್ರವಾಹ ಉಂಟಾದಾಗ ರಕ್ಷಣ ಕಾರ್ಯ ಮೊದಲು ನಡೆಯಲಿದೆ.ನಂತರ ಪರಿಹಾರ ನೀಡಲಾಗುತ್ತದೆ.ಈಗಾಗಲೇ ಸಂತ್ರಸ್ತರಿಗೆ 10 ಸಾವಿರ ರೂ.ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ  ಮನೆಕಟ್ಟಿಕೊಡುವ ಕೆಲಸವಾಗಬೇಕಿದೆ. ಎಲ್ಲೂ ಕೂಡ ಪರಿಹಾರ ಕಾರ್ಯ ನಿಂತಿಲ್ಲ. ಕೇಂದ್ರದಿಂದ ಅನುದಾನ ಬಂದರೆ  ಪರಿಹಾರ ಕಾರ್ಯ ಇನ್ನಷ್ಟು ತ್ವರಿತಗೊಳ್ಳುವುದು ಎಂದರು.

ಕಳೆದ ವರ್ಷವೂ ಒಂದೂವರೆ ತಿಂಗಳ ನಂತರ ಕೇಂದ್ರದಿಂದ ಪರಿಹಾರ ಧನ ಬಂದಿತ್ತು.ಕೇಂದ್ರದ ನೆರವು ಕೋರುವುದು ರಾಜ್ಯದ ಧರ್ಮ.ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದರು.

ಬಿಜೆಪಿ  ಮುಖಂಡರ ವಿಭಿನ್ನ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದಷ್ಟೇ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ