ಸರ್ಕಾರ ಸಲ್ಲಿಕೆ ಮಾಡಿದ್ದ ವರದಿಯನ್ನು ಕೇಂದ್ರ ತಿರಸ್ಕರಿಸಿಲ್ಲ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಳಗಾವಿ,ಅ.4-ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಬಿಡುಗಡೆ ಮಾಡುವ ಸಂಬಂಧ ಕೇಂದ್ರ ಸರ್ಕಾರ ರಾಜ್ಯದ ವರದಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಯನ್ನು ಕೇಳಿದೆ ಹೊರತು ತಿರಸ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡಿರುವ ವರದಿಗೂ, ಕೇಂದ್ರದ ಉನ್ನತ ಅಧಿಕಾರಿಗಳ ತಂಡ ನೀಡಿರುವ ವರದಿಗೂ ತಾಳೆಯಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೇಳಿದೆ.ಆದರೆ ರಾಜ್ಯ ಸರ್ಕಾರ ಸಲ್ಲಿಕೆ ಮಾಡಿದ್ದ ವರದಿಯನ್ನು ತಿರಸ್ಕರಿಸಿಲ್ಲ ಎಂದು ಪುನರುಚ್ಚರಿಸಿದರು.

ರಾಜ್ಯದ ಪ್ರಸ್ತಾವ ಹಾಗೂ ಕೇಂದ್ರ ತಂಡದ ವರದಿ ಹೊಂದಾಣಿಕೆಯಾಗುತ್ತಿಲ್ಲ. ಈ ಕಾರಣಕ್ಕೆ ಪರಿಶೀಲನೆ ಮಾಡಬೇಕೆಂದು ಕೇಂದ್ರ ಸರ್ಕಾರ ಕೇಳಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ರಾಜ್ಯ ಸರ್ಕಾರದ ವರದಿಯನ್ನು ಕೇಂದ್ರ ತಿರಸ್ಕರಿಸಿದೆ ಎಂಬುದು ಸುಳ್ಳು.ಸ್ಪಷ್ಟನೆ ಕೇಳಿರುವುದರಿಂದ ರಾಜ್ಯದಿಂದ ಈಗಾಗಲೇ ಇಬ್ಬರು ಅಧಿಕಾರಿಗಳು ನವದೆಹಲಿಗೆ ತೆರಳಿದ್ದಾರೆ ಎಂದು ತಿಳಿಸಿದರು.

ಪ್ರವಾಹದಿಂದ ಉಂಟಾಗಿರುವ ನಷ್ಟದ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಲಿದ್ದಾರೆ.ಎರಡುಮೂರು ದಿನಗಳಲ್ಲಿ ನಮಗೆ ಕೇಂದ್ರದಿಂದ ಹಣ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಖುದ್ದು ನಾನೇ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವರಾದ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಕೇಂದ್ರದಿಂದ ಆಗಮಿಸಿದ್ದ ಅಧಿಕಾರಿಗಳ ತಂಡಕ್ಕೆ ನಮ್ಮ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಜೊತೆಗೆ ಕೇಂದ್ರ ಸಚಿವರ  ಜೊತೆ ನಾನೇ ಮಾತುಕತೆ ನಡೆಸಿ ವಸ್ತುಸ್ಥಿತಿಯನ್ನು ವಿವರಿಸಿದ್ದೇನೆ. ಒಂದೆರಡು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಜನರು ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು.

ಸುಮಾರು 8ರಿಂದ 10 ರಾಜ್ಯಗಳಲ್ಲಿಪ್ರವಾಹ ಉಂಟಾಗಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಯಾವುದೇ ರಾಜ್ಯಗಳಿಗೂ ಕೇಂದ್ರದಿಂದ ಈವರೆಗೂ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ನಾವು ಕರ್ನಾಟಕಕ್ಕೆ ಪರಿಹಾರ ಬಿಡುಗಡೆ ಮಾಡುವುದರ  ಜೊತೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಳಿಕೊಂಡಿದ್ದೇವೆ.

ನಮಗೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಸಿಗುವ ವಿಶ್ವಾಸವಿದೆ. ಸಂತ್ರಸ್ತರು  ಆತಂಕಕ್ಕೆ ಒಳಗಾಗಬಾರದು. ರಾಜ್ಯ ಸರ್ಕಾರ ನಮ್ಮ ಆರ್ಥಿಕ ಇತಿಮಿತಿಯೊಳಗೆ ಎಲ್ಲ ನೆರವು ನೀಡುತ್ತಿದೆ.

ಮನೆ ಕೊಚ್ಚಿ ಹೋಗಿದ್ದರೆ ಹೊಸ ಮನೆ ಕಟ್ಟಲು 5 ಲಕ್ಷ ರೂ.ರಿಪೇರಿಗೆ ಒಂದು ಲಕ್ಷ ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡಿದರೆ 10 ಸಾವಿರ ಪರಿಹಾರ ನೀಡುತ್ತಿದ್ದೇವೆ. ಈಗಾಗಲೇ ಮನೆಯ ತಳಪಾಳ ಹಾಕುವವರಿಗೆ ಒಂದು ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.ದುರಸ್ತಿಗೆ 25 ಸಾವಿರ ಆರ್ಥಿಕ ನೆರವು ಬಿಡುಗಡೆ ಮಾಡಿದ್ದೇವೆ.

ಕೇಂದ್ರದ ಅನುದಾನವನ್ನು ಕಾಯ್ದೆ ನಾವು ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಹಣ ಬಿಡುಗಡೆಯಾಗಿರುವುದು ವಿಳಂಬವಾಗಿದೆ ಹೊರತು ಕೇಂದ್ರ ನಮಗೆ ನೆರವು ನೀಡಲು ಮೀನಾಮೇಷ ಎಣಿಸುತ್ತಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬುದು ಸುಳ್ಳು. ಒಂದು ವೇಳೆ ನಮ್ಮ ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿದ್ದರೆ ನಾವು ಪರಿಹಾರ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿರುತ್ತಿರಲಿಲ್ಲ. ನಮ್ಮ ಇತಿಮಿತಿಯೊಳಗೆ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು  ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.

ಮಧ್ಯಂತರ ಚುನಾವಣೆ ಇಲ್ಲ:

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ. ಉಳಿದಿರುವ ಅವಧಿಯನ್ನು ಬಿಜೆಪಿ ಪೂರ್ಣಗೊಳಿಸಲಿದೆ. ವಿರೋಧ ಪಕ್ಷಗಳ ಕನಸು ಕನಸಾಗಿಯೇ ಉಳಿಯಲಿದೆ ಎಂದು ವ್ಯಂಗ್ಯವಾಡಿದರು.

ಉಪಚುನಾವಣೆಗೂ ಮುನ್ನ ಮಧ್ಯಂತರ ಚುನಾವಣೆ ಬರಲಿದೆ ಎಂಬ ಪ್ರತಿಪಕ್ಷಗಳ ಕನಸು ಎಂದಿಗೂ ಈಡೇರುವುದಿಲ್ಲ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಂತರ ಚುನಾವಣೆ ಬರಲಿದೆ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಇಂತಹ ಬೇಜಾವಬ್ದಾರಿ ಹೇಳಿಕೆಯನ್ನು ಅವರಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾದರೂ ಪರಿಹಾರ ಕಾರ್ಯ ನಿಂತಿದ್ದರೆ ತೋರಿಸಿ ಕೊಡಲಿ.ಸಂತ್ರಸ್ತರಿಗೆ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿದ್ದೇವೆ. ಲೂಟಿಕೋರರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರವೇ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ