ಬಿಬಿಎಂಪಿಯಲ್ಲಿ ಮಾತ್ರ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ

ಬೆಂಗಳೂರು,ಅ.4- ಸಂತ್ರಸ್ತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಿದ್ದಾರೆ. ಆದರೆ ಬಿಬಿಎಂಪಿಯಲ್ಲಿ ಮಾತ್ರ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ತರಾ..ಆಗೋಗಿದೆ.

ಇಲ್ಲಿ  ಯಾರು  ಹೇಳೋರು… ಕೇಳೋರು ಇಲ್ಲ. ತಾವು ನಡೆದಿದ್ದೇ ಹಾದಿ ಎಂಬಂತಾಗಿದೆ.ಜನರ ತೆರಿಗೆ ಹಣ ಅಂದರೆ ಇವರಿಗೆ ಕಸಕ್ಕೆ ಸಮಾನವಾದಂತಾಗಿದೆ.

ಅಧಿಕಾರ ವಹಿಸಿಕೊಂಡು ಇನ್ನು  48ಗಂಟೆ ಕಳೆದಿಲ್ಲ. ನಮ್ಮ  ಉಪಮೇಯರ್ ಮಹಾಶಯರಿಗೆ 35 ಲಕ್ಷ ವೆಚ್ಚದ ಇನೋವಾ ಕ್ರಿಸ್ಟ್ ಕಾರು ಖರೀದಿಸಲಾಗಿದೆ.    ಇನ್ನು ಬಿಬಿಎಂಪಿ ಆಯುಕ್ತರಾದ ಅನಿಲ್‍ಕುಮಾರ್‍ಗೂ ಕೂಡ ಇದೇ ಮೊತ್ತದ ಹೊಸ ಕಾರ್ ಅನ್ನು ಖರೀದಿಸಲಾಗಿದೆ.ಈಗಾಗಲೇ ಗುಣಮಟ್ಟದ ಕಾರ್‍ಗಳಿದ್ದರೂ ಅವುಗಳನ್ನು ಶೆಡ್‍ಗಳಿಗೆ ಹಾಕಿ ಹೊಸ ಕಾರ್‍ಗಳನ್ನು ಖರೀದಿ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ನಿರಂತರ ಆರೋಪ ಮಾಡುವ ಬಿಜೆಪಿ ತಾನು ಮಾಡುತ್ತಿರುವುದಾದರು ಏನು?ಇದೇನಾ ಈ ಪಕ್ಷದ ಸಂಸ್ಕøತಿ?ಈಗಾಗಲೇ ಪಾಲಿಕೆ ನಷ್ಟದಲ್ಲಿದೆ.ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ. ಸಂಪನ್ಮೂಲದ ಕ್ರೋಢೀಕರಣದಲ್ಲಿ ಹಿಂದೆ ಬಿದ್ದಿದೆ.

ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸದ ಹಿನ್ನಲೆಯಲ್ಲಿ ಜನರು ಒಂದಲ್ಲ ಒಂದು ಕಾರಣದಿಂದ ಬಿಬಿಎಂಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ.  ಈ ಸಂದರ್ಭದಲ್ಲಿ ಒಂದು ವರ್ಷದ ಅವಧಿಯಲ್ಲಿ ಇಬ್ಬರಿಗೆ 70ಲಕ್ಷ ರೂ.ವೆಚ್ಚದಲ್ಲಿ ಎರಡು ಕಾರುಗಳನ್ನು ಖರೀದಿ ಮಾಡಿರುವ ಹಕೀಕತ್ತು ಏನು?  ಇದು ನಾವು ಕೇಳಿತ್ತಿರುವ ಪ್ರಶ್ನೆಯಲ್ಲ..ಪಾಲಿಕೆಯ ಆವರಣದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿರುವುದು ಬಿಬಿಎಂಪಿಯ ಕರ್ತವ್ಯ. ಆದರೆ ಆಡಳಿತ ನಡೆಸುವವರು ತಮ್ಮ ಹಿತಾಸಕ್ತಿಗಾಗಿ ಇಷ್ಟು ಪ್ರಮಾಣದ ದುಂದುವೆಚ್ಚ ಮಾಡುವುದು ಎಷ್ಟು ಸರಿ ಎಂಬುದು ತೆರಿಗೆದಾರರ ಪ್ರಶ್ನೆಯಾಗಿದೆ.

ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಉದ್ಯಾನವನ, ಕಸ ನಿರ್ವಹಣೆ ಮುಂತಾದವುಗಳನ್ನು ನಿರ್ವಹಿಸುವಲ್ಲಿ ನಿರಂತರವಾಗಿ ವಿಫಲವಾಗಿರುವ ಪಾಲಿಕೆ ಇಂತಹ ದುಂದುವೆಚ್ಚಕ್ಕೆ ಮುಂದಾಗಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

ದುಂದುವೆಚ್ಚದ ಕಾರುಗಳ ಖರೀದಿ ಜನಪ್ರತಿನಿಧಿಗಳ ಒತ್ತಾಸೆಯೋ, ಅಧಿಕಾರಿಗಳ ಕರಾಮತ್ತೋ ಗೊತ್ತಿಲ್ಲ. ಒಟ್ಟಾರೆ ಜನರ ದುಡ್ಡಂತೂ ಅನಾಮತ್ತಾಗಿ ಖಾಲಿಯಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ