ಮುಂಬೈ: ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾಗಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಉದ್ಯಮಿ ಪೀಟರ್ ಮುಖರ್ಜಿ ಹಾಗೂ ಪತ್ನಿ ಇಂದ್ರಾಣಿ ಮುಖರ್ಜಿ ಇದೀಗ ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ.
ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯ 17 ವರ್ಷಗಳ ವೈವಾಹಿಕ ಜೀವನ ಜೈಲಿನಲ್ಲಿ ಕೊನೆಗೊಂಡಿದೆ. ಪೀಟರ್ ಮುಖರ್ಜಿ ಗೆ 63 ವರ್ಷ, ಇಂದ್ರಾಣಿ ಪೀಟರ್ ಗಿಂತ 16 ವರ್ಷ ಚಿಕ್ಕವಳು. ಮುಂದಿನ ಜನವರಿಗೆ ಇಂದ್ರಾಣಿ 48ನೇ ವರ್ಷಕ್ಕೆ ಕಾಲಿಡಲಿದ್ದು, 2015ರಿಂದ ಈಕೆಯೂ ಮಗಳ ಕೊಲೆ ಪ್ರಕರಣದಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರೆ.
ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಗುರುವಾರ ಅಂತಿಮವಾಗಿ ಕೋರ್ಟ್ ಸಮ್ಮತಿ ನೀಡಿದೆ ಎಂದು ವರದಿ ತಿಳಿಸಿದೆ.
ವಿಚ್ಛೇದನ ಪ್ರಕ್ರಿಯೆಗಾಗಿ ಇಬ್ಬರನ್ನು ಪೊಲೀಸರು ಪ್ರತ್ಯೇಕ ವಾಹನದಲ್ಲಿ ಕರೆತಂದಿದ್ದರು. ಇಂದ್ರಾಣಿಯನ್ನು ನಾಲ್ವರು ಪೊಲೀಸರ ಬಂದೋಬಸ್ತ್ ನಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಕರೆತಂದಿದ್ದರು. ಸುಮಾರು 45 ನಿಮಿಷಗಳ ನಂತರ ಪೀಟರ್ ಕೋರ್ಟ್ ಗೆ ಆಗಮಿಸಿರುವುದಾಗಿ ವರದಿ ವಿವರಿಸಿದೆ.
ಇಬ್ಬರೂ ಮುಂಬೈ, ಗೋವಾದಲ್ಲಿರುವ ಫ್ಲ್ಯಾಟ್ಸ್, ಸ್ಪೇನ್ ನ ಮಾರ್ಬೆಲ್ಲಾದ ಹಾಗೂ ಇಂಗ್ಲೆಂಡ್ ನಲ್ಲಿರುವ ಆಸ್ತಿ, ಬ್ಯಾಂಕ್ ಠೇವಣಿ, ಚಿನ್ನಾಭರಣ, ವಾಚ್, ಬ್ರಿಸ್ಟಲ್ ಬ್ಲೂ ಲ್ಯಾಂಪ್ಸ್, ಪಿಕಾಸೋ ಚಿತ್ರ, ಬಂಡವಾಳವನ್ನು ಹಂಚಿಕೊಳ್ಳಬೇಕು ಎಂದು ಕೌಟುಂಬಿಕ ನ್ಯಾಯಾಲಯ ಸೂಚಿಸಿದೆ.