
ಬೆಂಗಳೂರು, ಅ.3-ರಾಜಕಾಲುವೆ ಅಭಿವೃದ್ಧಿ ಮತ್ತು ಹೂಳೆತ್ತುವ ಹೆಸರಿನಲ್ಲಿ ನೂರಾರು ಕೋಟಿ ರೂ. ಲೂಟಿ ಮಾಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭಾರೀ ಹಗರಣವೊಂದನ್ನು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಬಯಲು ಮಾಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಡಬ್ಲ್ಯುಡಿ ಇಲಾಖೆ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಸೇರಿದಂತೆ 8 ವಲಯಗಳ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರುಗಳನ್ನು ದಾಖಲಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ರಾಜಕಾಲುವೆಗಳ ಹೂಳೆತ್ತುವ ಕಾರ್ಯದಲ್ಲಿ ಭಾರೀ ಹಗರಣವೇ ನಡೆದಿದೆ.
ಒಂಭತ್ತು ವಿಭಾಗಗಳಲ್ಲಿ 210.9 ಕಿಲೋಮೀಟರ್ ಉದ್ದದ ರಾಜ ಕಾಲುವೆಗಳಲ್ಲಿ ಒಟ್ಟು 6.49600ಕ್ಯೂಬಿಕ್ ಮೀಟರ್ನಷ್ಟು ಬೃಹತ್ ಪ್ರಮಾಣದ ಹೂಳನ್ನು 29 ಕೋಟಿ ವೆಚ್ಚದಲ್ಲಿ ಹೊರತೆಗೆದು ಬೆಳ್ಳಳ್ಳಿ ಮತ್ತು ಅಂಜನಾಪುರ ಕ್ವಾರಿಗಳಲ್ಲಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಷ್ಟು ಪ್ರಮಾಣದ ಹೂಳನ್ನು ತೆಗೆದು ಒಂದು ಸ್ಥಳದಲ್ಲಿ ಹಾಕಿದರೆ ಅದು ನಂದಿ ಬೆಟ್ಟಕ್ಕಿಂತ ಎತ್ತರವಾಗುತ್ತದೆ. ಇಷ್ಟನ್ನು ಸಾಗಿಸಲು 14, 450 ಟ್ರಕ್ಗಳು ಬೇಕಾಗುತ್ತವೆ. ಇಷ್ಟು ಪ್ರಮಾಣದ ಟ್ರಕ್ಗಳು ನಗರದಲ್ಲಿ ಎಲ್ಲಿ ಓಡಾಡಿದವು ಎಂದು ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮೈತ್ರಿ ಪಕ್ಷದ ಮೇಯರ್ ಆಗಲಿ, ಉಪಮೇಯರ್ ಆಗಲಿ ತನಿಖೆಗೆ ಮುಂದಾಗಲಿಲ್ಲ. ಅಧಿಕಾರಿಗಳು ಶೇ.75ರಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
842 ಕಿಲೋಮೀಟರ್ ಉದ್ದದ ರಾಜಕಾಲುವೆಗಳ ಪೈಕಿ ಸುಮಾರು 400 ಕಿ.ಮೀ ಉದ್ದದ ರಾಜಕಾಲುವೆಗಳು, ಅವುಗಳ ಅಕ್ಕಪಕ್ಕದ 1600 ಎಕರೆಗೂ ಹೆಚ್ಚು ವಿಸ್ತೀರ್ಣದ ಬಫರ್ಝೋನ್ ಪ್ರದೇಶಗಳು ಸಂಪೂರ್ಣವಾಗಿ ಒತ್ತುವರಿಯಾಗಿವೆ.
ರಾಜಕಾಲುವೆಗಳಲ್ಲಿ ಒಟ್ಟು 2,515 ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಪೈಕಿ 428 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.ಉಳಿದ ಪ್ರಕರಣಗಳ ಒತ್ತುವರಿ ತೆರವುಗೊಳಿಸಬೇಕಿದೆ ಎಂಬ ಮಾಹಿತಿ ನೀಡಿದ್ದಾರೆ.
ಅಧಿಕಾರಿಯೇ ಆರೋಪಿ:
ಬೃಹತ್ ಮಳೆ ನೀರುಗಾಲುವೆ ಇಲಾಖೆ ಮುಖ್ಯ ಅಭಿಯಂತರರಾದ ಬಿ.ಎಸ್.ಪ್ರಹ್ಲಾದ್ ಸ್ವತಃ ತಾವು ವಾಸಿಸುವ ಕಟ್ಟಡವನ್ನು ಬಫರ್ಝೋನ್ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದಾರೆ. ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿದ್ದು, ಇದನ್ನು ತೆರವುಗೊಳಿಸಬೇಕೆಂದು ಆಯುಕ್ತರನ್ನು ಆಗ್ರಹಿಸಿದರು.
ಇದಲ್ಲದೆ ರಾಜಕಾಲುವೆ ಪುನಶ್ಚೇತನ ಹೆಸರಿನಲ್ಲೂ ಭಾರೀ ಅಕ್ರಮ ನಡೆದಿದೆ.ಪಾಲಿಕೆ ವ್ಯಾಪ್ತಿಯ ನಾಲ್ಕು ಕಣಿವೆಗಳಿಗೆ ಸಂಬಂಧಿಸಿದ ರಾಜಕಾಲುವೆ ಪುನಶ್ಚೇತನ ಕಾರ್ಯಕ್ಕೆಂದು ಆರು ಪ್ಯಾಕೇಜ್ಗಳಲ್ಲಿ ಒಟ್ಟು 800 ಕೋಟಿ ಮೊತ್ತದ ಟೆಂಡರ್ಗಳನ್ನು 2016-17ರಲ್ಲಿ ಕರೆದು ಸುಮಾರು 200ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದಷ್ಟು ಹಣ ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಮತ್ತು ಭ್ರಷ್ಟ ಅಧಿಕಾರಿಗಳ ಪಾಲಾಗಿದೆ ಎಂದು ಆರೋಪಿಸಿದರು.
2018-19ನೇ ಸಾಲಿನ ನವಬೆಂಗಳೂರು ಯೋಜನೆ ಅನುದಾನದಡಿ 1044.64 ಕೋಟಿ ರೂ.ಬಿಡುಗಡೆಯಾಗಿದ್ದು, 165 ಕಾಮಗಾರಿಗಳ ಅನುದಾನದಲ್ಲಿಯೂ ಕನಿಷ್ಠ 300 ಕೋಟಿ ರೂ.ಲೂಟಿ ಮಾಡುವ ಕಾರ್ಯತಂತ್ರ ರೂಪಿಸಲಾಗಿದೆ ಎಂದು ದೂರಿದರು.
ರಾಜಕಾಲುವೆಗಳ ಪುನಶ್ಚೇತನ, ಅಭಿವೃದ್ಧಿ, ಹೂಳೆತ್ತುವ ಕಾರ್ಯ ಮತ್ತು ವಾರ್ಷಿಕ ನಿರ್ವಹಣೆ ಹೆಸರಿನಲ್ಲಿ ನಡೆದಿರುವ ನೂರಾರು ಕೋಟಿ ರೂ. ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಎಸ್ಡಬ್ಲ್ಯುಡಿ ಇಲಾಖೆ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಸೇರಿದಂತೆ 8 ವಲಯಗಳ ಅಭಿಯಂತರ ಕಾರ್ಯಪಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜಕಾಲುವೆಗಳ ಅಭಿವೃದ್ಧಿಗೆ 1144.64 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಆಹ್ವಾಸಿರುವ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ, ಹೊಸದಾಗಿ ಕ್ರಿಯಾಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಈ ಎಲ್ಲಾ ಅಕ್ರಮಗಳ ವಿವರಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ್ದು, ಅವರು ತನಿಖೆಗೆ ಆದೇಶಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.