ಮಹತ್ವದ ಯೋಜನೆಗಳಿಗೆ ಸಚಿವ ಸಂಪುಟದಿಂದ ಅನುಮೋದನೆ

ಬೆಂಗಳೂರು, ಅ.3-ಆಶಾಕಾರ್ಯಕರ್ತೆಯರಿಗೆ 500 ರೂ. ಗೌರವ ಧನ ಹೆಚ್ಚಳ, ಮಹಾತ್ಮಗಾಂಧೀಜಿಯವರ 150ನೇ ಜಯಂತಿ ವಾರ್ಷಿಕೋತ್ಸವದ ಅಂಗವಾಗಿ 20 ಸನ್ನಡತೆ ಖೈದಿಗಳ ಬಿಡುಗಡೆ,  ಕೈಗಾರಿಕಾ ನೀತಿಯಡಿ ಕರ್ನಾಟಕ ಏರೋ ಸ್ಪೇಸ್ ನೀತಿ ಸೇರಿದಂತೆ  ಹಲವು ಮಹತ್ವದ  ಯೋಜನೆಗಳಿಗೆ ಸಚಿವ ಸಂಪುಟ ಇಂದು ಅನುಮೋದನೆ  ನೀಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ  ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಕೈಗಾರಿಕಾ ನೀತಿಯಡಿ ಮೆಗಾ / ಅಲ್ಟ್ರಾ , ಮೆಗಾ/ಸೂಪರ್ ಯೋಜನೆಗಳಿಗೆ ಮತ್ತು ಕರ್ನಾಟಕ ಏರೋ ಸ್ಪೇಸ್ ನೀತಿ, ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಅಂಡ್ ಎನರ್ಜಿ ಸ್ಟೋರೇಜ್ ಪಾಲಿಸಿ  ಮತ್ತು ನೂತನ ಜವಳಿ ನೀತಿಯಡಿ ಮೆಗಾ ಯೋಜನೆಗಳಿಗೆ  ವಿಶೇಷ ರಿಯಾಯ್ತಿ ಮತ್ತು ಉತ್ತೇಜನಗಳನ್ನು ಮಂಜೂರು ಮಾಡಲು ಉಪಸಮಿತಿ ರಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಗಾಂಧೀಜಿಯವರ 150ನೇ ಜಯಂತಿ ವಾರ್ಷಿಕೋತ್ಸವದ ಅಂಗವಾಗಿ ನಿರ್ದಿಷ್ಟ ವರ್ಗದ 20 ಶಿಕ್ಷಾಬಂಧಿಗಳನ್ನು ವಿಶೇಷ ಮಾಫಿಯೊಂದಿಗೆ  2 ಮತ್ತು 3 ಹಂತದಲ್ಲಿ ಬಿಡುಗಡೆ ಮಾಡುವುದರ ಬಗ್ಗೆ  ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದ ಎಲ್ಲಾ ರಕ್ತನಿಧಿ ಕೇಂದ್ರಗಳನ್ನು ಮತ್ತು ರಕ್ತ ಶೇಖರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು ಹೊಸದಾಗಿ ರಕ್ತ ಶೇಖರಣಾ ಘಟಕಗಳನ್ನುಸ್ಥಾಪಿಸಲು ಅವಶ್ಯವಿರುವ ಉಪಕರಣಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 12 ಕೋಟಿ ರೂ.ಗಳ  ಅನುದಾನದಲ್ಲಿ  ಖರೀದಿಸಲು ಆಡಳಿತಾತ್ಮಕ ಅನುಮೋದನೆ.

ಮಕ್ಕಳ ಆರೋಗ್ಯ ಕಾರ್ಯಕ್ರಮಕ್ಕೆ ಔಷಧಿ ಉಪಕರಣ ಸಲಕರಣೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಖರೀದಿಸಲು ಅನುಮೋದನೆ.

ಬಾಗಲಕೋಟೆ ಜಮಖಂಡಿಯಲ್ಲಿ 100 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ವಸತಿ ಗೃಹ ಕಟ್ಟಡಗಳನ್ನು  ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 20.90 ಕೋಟಿ ರೂ. ವೆಚ್ಚದ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು  ಆಡಳಿತಾತ್ಮಕ ಅನುಮೋದನೆಗೆ   ಸಂಪುಟ ಒಪ್ಪಿಗೆ ನೀಡಿದೆ.

ಹಾವೇರಿ ಜಿಲ್ಲೆ, ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯ ರಟ್ಟಿಹಳ್ಳಿ, ತೋಟಗಂಡಿ ಮತ್ತು ಕವಳೆಕುಪ್ಪಿ ಗ್ರಾಮಗಳನ್ನು ಒಳಗೊಂಡ ಪ್ರದೇಶಗಳನ್ನು ಪಟ್ಟಣ  ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವುದು, ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು  ಸುಗ್ಗನಹಳ್ಳಿ ಗ್ರಾಮದ ಬಳಿ  ಇಂಗು ಕೆರೆ ನಿರ್ಮಾಣ ಮಾಡಿ ವಡವಿ ಹೊಸೂರು ಕೆರೆಯಿಂದ ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ 14 ಕೋಟಿ ರೂ. ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಂಬಂಧ ಸಂಪುಟ ನಿರ್ಣಯ ಕೈಗೊಂಡಿದೆ.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ