ಅನರ್ಹ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ-ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್

ಬೆಂಗಳೂರು,ಅ.3- ಯಾವುದೇ ಕಾರಣಕ್ಕೂ ಅನರ್ಹ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಮೂಲಕ ಉಪಚುನಾವಣೆಯಲ್ಲಿ  ಪಕ್ಷದ ವತಿಯಿಂದ ಟಿಕೆಟ್ ನೀಡುವುದು ಖಚಿತ ಎಂಬ ಸುಳಿವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನೀಡಿದ್ದಾರೆ.

ಅನರ್ಹ ಶಾಸಕರ ಪ್ರಕರಣವು ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿದೆ.  ಒಂದು ವೇಳೆ ಅನರ್ಹರ ಪರವಾಗಿ ತೀರ್ಪು ಬಂದರೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಸಂಬಂಧ ನಾನು,  ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಚರ್ಚೆ ಮಾಡಿ ಟಿಕೆಟ್ ಹಂಚಿಕೆ ಅಂತಿಮೆಗೊಳಿಸುತ್ತೇವೆ. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪುನರುಚ್ಚಿಸಿದರು.

ಅನರ್ಹರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಟಿಕೆಟ್ ಘೋಷಣೆ ಮಾಡಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾಯಾಲಯದ ತೀರ್ಪು ಬಂದ ಬಳಿಕ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ಅನರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪಕ್ಷ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ ಎಂದು ಪರೋಕ್ಷವಾಗಿ ಧೈರ್ಯ ತುಂಬಿದರು.

ನನ್ನ ಮತ್ತು ಯಡಿಯೂರಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಬೆಳಗಾವಿ ಜಿಲ್ಲೆಯ  ಪ್ರವಾಸದಲ್ಲಿದ್ದೆ. ಅವರು ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದರು.ಹೀಗಾಗಿ ಸಂಪರ್ಕದ ಕೊರತೆ ಉಂಟಾಗಿದೆ ವಿನಃ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾನು  ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಯಡಿಯೂರಪ್ಪನವರ ಮಾರ್ಗದರ್ಶನ ಪಡೆಯುತ್ತೇನೆ. ಅವರ ಸಲಹೆಸೂಚನೆಯಂತೆಯೇ ನಡೆದುಕೊಳ್ಳುತ್ತಿದ್ದೇವೆ. ಪದಾಧಿಕಾರಿಗಳ ನೇಮಕಾತಿ, ಬಿಬಿಎಂಪಿ ಮೇಯರ್ ಚುನಾವಣೆ ಸೇರಿದಂತೆ ಯಾವುದೇ ತೀರ್ಮಾನವಾಗಬೇಕಾದರೂ ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡುತ್ತೇವೆ ಎಂದರು.

ಭಾನುಪ್ರಕಾಶ್ ಅವರನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯನ್ನು ನೇಮಕ ಮಾಡಲಾಗಿತ್ತು.ಅಲ್ಲದೆ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವುದಕ್ಕೇ ಯಡಿಯೂರಪ್ಪನವರೇ ಸೂಚನೆ ಕೊಟ್ಟಿದ್ದರು.ನಿರ್ಮಲ್‍ಕುಮಾರ್ ಸುರಾನ ಅವರಿಗೆ ಕೇರಳದಲ್ಲಿ ಉಸ್ತುವಾರಿ ನೀಡಲಾಗಿತ್ತು.ನಮ್ಮ ರಾಜ್ಯದವರು ನಮ್ಮಲ್ಲೇ ಪಕ್ಷದ ಸಂಘಟನೆಯಲ್ಲಿ ಇರಬೇಕೆಂಬುದು ಎಲ್ಲರ ತೀರ್ಮಾನವಾಗಿತ್ತು. ಇದರಂತೆ ಅವರನ್ನು ಮರುನೇಮಕ ಮಾಡಿಕೊಂಡಿದ್ದೇವೆ. ಇದರಲ್ಲಿ  ಗುಲಗಂಜಿಯಷ್ಟು ವ್ಯತ್ಯಾಸಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರಿಂದ ತೆರವಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿದರು.ಅದೇ ರೀತಿ ಸಿ.ಟಿ.ರವಿ ಸಂಪುಟಕ್ಕೆ ಸೇರ್ಪಡೆಯಾಗಿದ್ದರಿಂದ ಅವರ ಬಳಿ ಇದ್ದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಮಹೇಶ್ ತೆಂಗಿನಕಾಯಿಗೆ ನೀಡಲಾಯಿತು.ನಮ್ಮಲ್ಲಿ ಏಕವ್ಯಕ್ತಿ-ಒಂದೇ ಹುದ್ದೆ ನಿಯಮದಂತೆ ಯಾರೂ ಕೂಡ ಎರಡೆರಡು ಹುದ್ದೆಯಲ್ಲಿ ಮುಂದುವರೆಯುವುದಿಲ್ಲ. ಇದು ಪ್ರತಿಯೊಬ್ಬರಿಗೂ ಅನ್ವಯ ಎಂದು ಹೇಳಿದರು.

ಬಿಬಿಎಂಪಿ ಚುನಾವಣೆಯಲ್ಲೂ ನಾವು ಪಕ್ಷದ ಎಲ್ಲ ಪ್ರಮುಖರ ತೀರ್ಮಾವನ್ನು ಪಡೆದೇ ಗೌತಮ್‍ಕುಮಾರ್ ಜೈನ್ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೆವು.ಯಡಿಯೂರಪ್ಪನವರ ಬಳಿ ಮೂರು ಬಾರಿ ಚರ್ಚೆ ಮಾಡಿದ್ದೆ.ಅದೇ ರೀತಿ ಸಚಿವ ಆರ್.ಅಶೋಕ್, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಸೇರಿದಂತೆ ಎಲ್ಲರ ಬಳಿಯೂ ಮಾತುಕತೆ ನಡೆಸಿದ್ದೆ.ಪಕ್ಷದ ಹಿತದೃಷ್ಟಿ, ಬೆಂಗಳೂರಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗಿದೆ.ಇದರಲ್ಲಿ ಭಿನ್ನಾಭಿಪ್ರಾಯ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರು ನಾಲ್ಕು ದಶಕಗಳಿಂದ ಹೋರಾಟದ ಹಿನ್ನೆಲೆಯಿಂದ ಬಂದವರು ಅವರಿಗೆ ರಾಜ್ಯದ ಪ್ರತಿ ಗ್ರಾಮಗಳ ಪರಿಚಯವೂ ಇದೆ.ಅಂಥವರ ಸಲಹೆ ಮಾರ್ಗದರ್ಶನ ಪಡೆದು ಪಕ್ಷದ ಸಂಘಟನೆ ಮಾಡುತ್ತಿದ್ದೇವೆ. ಪಕ್ಷವನ್ನು ಬಲಪಡಿಸಲು ಅವರು ಕೂಡ ನಮಗೆ ಸೂಕ್ತವಾದ ಸಲಹೆಮಾರ್ಗದರ್ಶನ ಮಾಡುತ್ತಿದ್ದಾರೆ.ಸರ್ಕಾರ ಮತ್ತು ಪಕ್ಷ ಜೊತೆ ಜೊತೆಯಾಗಿ ಮುನ್ನಡೆಯಬೇಕೆಂಬ ಉದ್ದೇಶವಿದೆ. ಹೀಗಾಗಿ ಕಾಲಕಾಲಕ್ಕೆ ಹಿರಿಯರಿಂದ ಸಲಹೆ ಪಡೆಯುವುದರಲ್ಲಿ  ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.

ಇಂದು ಯಡಿಯೂರಪ್ಪವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಪಕ್ಷದ ಸಂಘಟನೆ, ಜಿಲ್ಲಾಧ್ಯಕ್ಷರು, ಮಂಡಳ ಅಧ್ಯಕ್ಷರ ನೇಮಕಾತಿ ಸೇರಿದಂತೆ ಪಕ್ಷವನ್ನು  ಇನ್ನಷ್ಟು ಸಂಘಟಿಸುವ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ನೆರೆ ಪರಿಹಾರ ಕುರಿತಂತೆಯೂ ಸಿಎಂ ಬಳಿ ಚರ್ಚೆ ನಡೆಸಲಾಗಿದೆ. ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಂಪೂರ್ಣ ಮಾಹಿತಿ ಇದೆ. ಸದ್ಯದಲ್ಲೇ  ರಾಜ್ಯಕ್ಕೆ ಪರಿಹಾರದ ಹಣವನ್ನುಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಳಿಯೂ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಯಾರಿಗೂ ಯಾವ ರೀತಿಯ ಗೊಂದಲ ಬೇಡ ಎಂದು  ಕಟೀಲ್ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ