ಬೆಂಗಳೂರು, ಅ.3- ಅಗತ್ಯ ಕಂಡು ಬಂದರೆ ಅಧಿವೇಶನದ ಸಮಯವನ್ನು ವಿಸ್ತರಣೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿಗದಿಯಾಗಿರುವಂತೆ ರಾಜ್ಯಪಾಲರ ಅನುಮೋದನೆ ಪಡೆದು ಇದೇ 10ರಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಸಲಾಗುವುದು. ಒಂದು ವೇಳೆ ಅಧಿವೇಶನದ ಸಮಯವನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡಬೇಕೆಂದು ಪ್ರತಿಪಕ್ಷಗಳು ಬೇಡಿಕೆ ಇಟ್ಟರೆ ಸದನ ಸಲಹಾ ಸಮಿತಿ (ಬಿಎಸಿ)ಯಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದರು.
ಸದ್ಯಕ್ಕೆ ಮೂರು ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.ಇದಕ್ಕೆ ರಾಜ್ಯಪಾಲರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕೆಂದು ಪ್ರತಿಪಕ್ಷಗಳು ಬೇಡಿಕೆ ಇಟ್ಟರೆ ಸರ್ಕಾರ ಅದನ್ನು ಸಾಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಹೇಳಿದರು.
ಮೂರು ದಿನಗಳ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್ಗೆ ಅಧಿವೇಶನದಲ್ಲಿ ಲೇಖಾನುದಾನ ಪಡೆಯಲಿದೆ.ಸರ್ಕಾರದ ಮುಂದೆ ಈ ಹಿಂದೆ ನಾವು ಮೂರ ತಿಂಗಳ ಅವಧಿಗೆ ಲೇಖಾನುದಾನ ಪಡೆದಿದ್ದೆವು. ಹೊಸದಾಗಿ ಬಜೆಟ್ ಮಂಡನೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ನೆರೆ ಪರಿಹಾರ ಕುರಿತಂತೆ ಕೇಂದ್ರದಿಂದ 2-3 ದಿನಗಳಲ್ಲಿ ಪರಿಹಾರ ಬಿಡುಗಡೆಯಾಗುವ ವಿಶ್ವಾಸವಿದೆ.ಪ್ರಧಾನಮಂತ್ರಿಯವರೇ ಇಬ್ಬರು ಅಧಿಕಾರಿಗಳ ಮೂಲಕ ಮಾಹಿತಿ ಪಡೆದಿದ್ದಾರೆ.ಖುದ್ದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಹಣಕಾಸು ಸಚಿವರಾದ ನಿರ್ಮಿಲಾಸೀತರಾಮನ್ ಬಂದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.ಅಲ್ಲದೆ, ಪ್ರಧಾನಿಯವರಿಗೆ ಯಡಿಯೂರಪ್ಪ ಇಲ್ಲಿನ ಪ್ರತಿಯೊಂದು ಮಾಹಿತಿಯನ್ನೂ ನೀಡಿದ್ದಾರೆ. ನಾವು ಆಶಾದಾಯಕವಾಗಿದ್ದು, ಕೇಂದ್ರದಿಂದ ಶೀಘ್ರ ಪರಿಹಾರ ಬಿಡುಗಡೆಯಾಗುವ ವಿಶ್ವಾಸನಮಗಿದೆ ಎಂದರು.
ಕೇಂದ್ರದಿಂದ ಪರಿಹಾರ ಬಿಡುಗಡೆಯಾಗದೇ ಇದ್ದರೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ಖುದ್ದು ಸಿಎಂ, ಸಚಿವರು ಸೇರಿದಂತೆ ಎಲ್ಲರೂ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾಮಗಾರಿ ವೀಕ್ಷಣೆ ಮಾಡಿದ್ದೇವೆ. ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಕಾರ್ಯಕ್ಕೆ 3ಸಾವಿರ ಹಣ ಒದಗಿಸಿದ್ದೇವೆ. ದೇಶದ ಯಾವುದೇ ರಾಜ್ಯಗಳಲೂ ಮಳೆಯಿಂದ ಮನೆ ಕುಸಿದು ಬಿದ್ದರೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಇಷ್ಟು ದೊಡ್ಡ ಮೊತ್ತದ ಆರ್ಥಿಕ ನೆರವು ಕೊಡುತ್ತಿರಲಿಲ್ಲ. ಈಗಾಗಲೇ ತಳಪಾಯಕ್ಕೆ ಒಂದು ಲಕ್ಷ , ರಿಪೇರಿಗೆ ಒಂದು ಲಕ್ಷದ ಹಣದಲ್ಲಿ 50 ಸಾವಿರ ಮೊದಲ ಹಂತವಾಗಿ ಬಿಡುಗಡೆ ಮಾಡಲಾಗಿದೆ. ಬಾಡಿಗೆ ಇರುವವರಿಗೆ 10 ಸಾವಿರ ನೀಡಲಾಗುತ್ತಿದೆ.
ಕೇಂದ್ರದಿಂದ ಹಣ ಬಿಡುಗಡೆಯಾಗದಿದ್ದರೂ ರಾಜ್ಯ ಸರ್ಕಾರ ತನಗಿರುವ ಇತಿಮಿತಿ ವ್ಯಾಪ್ತಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಮಾಧುಸ್ವಾಮಿ ಸಮರ್ಥಿಸಿಕೊಂಡರು.