ನವದೆಹಲಿ; ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಎರಡು ದಿನಗಳ ಶಾಂತಿ ಭೇಟಿಗಾಗಿ ಮಂಗಳವಾರ ಸೌದಿ ಅರೇಬಿಯಾಗೆ ತೆರಳಿದ್ದು, ಈ ವೇಳೆ ಜಮ್ಮು–ಕಾಶ್ಮೀರ, ಭಯೋತ್ಪಾದನೆ ನಿರ್ಮೂಲನೆ ಮತ್ತು ಇಂಧನ ಪೂರೈಕೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಳೆದ ವಾರ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಕಿಡಿಕಾರಿದ ಹಿನ್ನೆಲೆ, ಈ ಕುರಿತು ಚರ್ಚಿಸಲು ಮತ್ತು ಕಾಶ್ಮೀರದ ವಿಚಾರದಲ್ಲಿ ಸೌದಿ ಅರೇಬಿಯಾದ ನಿಲುವನ್ನು ತಿಳಿಸಲು ಸ್ವತಃ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಜಿತ್ ದೋವಲ್ ಅವರನ್ನು ತಮ್ಮ ದೇಶಕ್ಕೆ ಸ್ವಾಗತಿಸಿದ್ದಾರೆ.
ಕಳೆದ ತಿಂಗಳು ಸೌದಿಯ ಪ್ರಮುಖ ತೈಲ ಘಟಕದ ಮೇಲೆ ಭಯೋತ್ಪಾದಕರು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದರು. ಇದರಿಂದ ಸೌದಿ ಅರೇಬಿಯಾದ ತೈಲ ಉತ್ಪನ್ನದ ಶೇ.50ರಷ್ಟು ಕುಂಠಿತವಾಗಿತ್ತು. ಹೀಗಾಗಿ ಭಾರತ-ಸೌದಿ ಅರೇಬಿಯಾ ನಡುವಿನ ಭಯೋತ್ಪಾದನಾ ವಿರೋಧಿ ಸಹಕಾರವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಉದ್ದೇಶದಿಂದಾಗಿ ಈ ದ್ವಿಪಕ್ಷೀಯ ಮಾತುಕತೆಯನ್ನು ಏರ್ಪಡಿಸಲಾಗಿತ್ತು.
ಎರಡು ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಮುಖಾಮುಖಿಯಲ್ಲಿ ದೋವಲ್ ಮತ್ತು ಸಲ್ಮಾನ್ ಅನೇಕ ಭಯೋತ್ಪಾದನೆ ನಿರ್ಮೂಲನೆ ಜೊತೆಗೆ ಅನೇಕ ಪ್ರಾದೇಶಿಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸೌದಿ ಅರೇಬಿಯಾದ ರಾಜಕೀಯ ಮತ್ತು ಭದ್ರತಾ ವ್ಯವಹಾರಗಳ ಪರಿಷತ್ತಿನ ಅಧ್ಯಕ್ಷರಾಗಿರುವ ಮುಸೈದ್ ಅಲ್ ಐಬನ್ ಅವರ ಜೊತೆಗೂ ದೋವಲ್ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತೆಯ ವಿಷಯಗಳ ಹಾಗೂ ನಿಕಟ ಭದ್ರತಾ ಸಂಬಂಧಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಸೌದಿ ಅರೇಬಿಯಾ ಭಾರತದ ಇಂಧನ ಬೇಡಿಕೆಯನ್ನು ಪೂರೈಸುವ ಪ್ರಮುಖ ರಾಷ್ಟ್ರವಾಗಿದ್ದು, ದೇಶದ ಶೇ.17 ರಷ್ಟು ಕಚ್ಚಾ ತೈಲ ಹಾಗೂ ಶೇ.32 ರಷ್ಟು ಎಲ್ಪಿಜಿ ಅಡಿಗೆ ಅನಿಲವನ್ನೂ ಪೂರೈಸುತ್ತಿದೆ. ಅಲ್ಲದೆ, ಈ ಭೇಟಿ ವೇಳೆ ಭಾರತದ ಇಂಧನದ ಅಗತ್ಯವನ್ನು ಪೂರೈಸಲು ತಾವು ಬದ್ಧವಿರುವುದಾಗಿ ಸೌದಿ ಅರೇಬಿಯಾ ನಾಯಕರು ಭಾರತಕ್ಕೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ನ್ಯೂಯಾರ್ಕ್ಗೆ ಹೋಗುವ ಮೊದಲೆ ತಮ್ಮ ಪತ್ನಿ ಬುಶ್ರಾ ಬಿಬಿ ಜೊತೆಗೆ ಸೌದಿ ಅರೇಬಿಯಾಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ವೇಳೆ ಮೆಕ್ಕಾಗೆ ಭೇಟಿ ನೀಡಿದ್ದ ಅವರು, ಸೌದಿ ರಾಜಕುಮಾರ ಸಲ್ಮಾನ್ ಜೊತೆಗೆ ವಿಶೇಷ ವಿಮಾನದಲ್ಲೇ ಅಮೆರಿಕ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ಮೂಲಕ ಪಾಕ್-ಸೌದಿ ನಡುವಿನ ನಿಕಟ ಸಂಬಂಧವನ್ನು ಇಡೀ ವಿಶ್ವಕ್ಕೆ ತೋರಿಸುವುದು ಅವರ ಉದ್ದೇಶವಾಗಿತ್ತು.
ಆದರೆ, ಈ ಘಟನೆ ನಡೆದು ಕೇವಲ ಒಂದೇ ವಾರದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಸಲ್ಮಾನ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ಗೆ ಕರೆ ನೀಡಿರುವುದು ಪ್ರಸ್ತುತ ಅಂತಾಷ್ಟ್ರೀಯಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಪಾಕಿಸ್ತಾನವನ್ನು ತನ್ನ ಪ್ರಮುಖ ಮಿತ್ರ ರಾಷ್ಟ್ರ ಎಂದೇ ಪರಿಗಣಿಸಿರುವ ಸೌದಿ ಅರೇಬಿಯಾ ಆರಂಭದಿಂದಲೂ ಭಯೋತ್ಪಾದನೆಯನ್ನು ತೊಡೆದು ಹಾಕಲು ಭಾರತಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಈ ಕುರಿತು ಭಾರತದ ಜೊತೆಗೆ ಹಲವಾರು ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಸೌದಿ ರಾಜಕುಮಾರ ಸಲ್ಮಾನ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಭಯೋತ್ಪಾದನೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಯೋತ್ಪಾದನಾ ನಿಗ್ರಹದ ಕುರಿತು ಎರಡು ದೇಶಗಳ ನಡುವೆ ಜಂಟಿ ಕಾರ್ಯ ಸಮೂಹವನ್ನೂ ರಚಿಸಲಾಗಿದೆ.