ಬಿಬಿಎಂಪಿ ಭ್ರಷ್ಟಾಚಾರದ ಸಂತೆಯಾಗಿದೆ-ಸಿಎಂ ಯಡಿಯೂರಪ್ಪ

ಬೆಂಗಳೂರು,ಅ.2-ಭ್ರಷ್ಟಾಚಾರದ ಸಂತೆಯಾಗಿರುವ ಬಿಬಿಎಂಪಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಸ್ವಚ್ಛ ಮತ್ತು ಪಾರದಾರ್ಶಕ ಆಡಳಿತ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಯರ್ ಮತ್ತು ಉಪಮೇಯರ್ ಅವರಿಗೆ ಸಲಹೆ ಮಾಡಿದ್ದಾರೆ.

ತಮ್ಮನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಜೈನ್ ಮತ್ತು ಉಪಮೇಯರ್ ಮೋಹನ್‍ರಾಜ್ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಬಿಎಂಪಿ ಭ್ರಷ್ಟಾಚಾರದ ಸಂತೆಯಾಗಿದೆ.ಜನರ ಮನಸ್ಸಿನಲ್ಲಿರುವ ಈ ಅನುಮಾನವನ್ನು ಹೋಗಲಾಡಿಸುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆ ಎಂದರು.

ಬಿಬಿಎಂಪಿಯಲ್ಲಿ ಯಾರೇ ಭ್ರಷ್ಟಾಚಾರ ಮಾಡಿದ್ದರೂ ಸಹಿಸುವ ಪ್ರಶ್ನೆಯೇ ಇಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲೇ ಬೇಕು.ಜನತೆಗೆ ನೀಡಿದ ಆಶ್ವಾಸನೆಯಂತೆ ಸ್ವಚ್ಛ, ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಬೇಕೆಂದು ಕಿವಿಮಾತು ಹೇಳಿದರು.

ಬೆಂಗಳೂರು ನಗರದ ಅಭಿವೃದ್ದಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಅಭಿವೃದ್ದಿ ಕಾರ್ಯಗಳಿಗೆ ಆರ್ಥಿಕ ಇತಿಮಿತಿಯಲ್ಲಿ ಅನುದಾನವನ್ನು ನೀಡಲಾಗುವುದು. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸಿಎಂ ಅಭಯ ನೀಡಿದರು.
ಇನ್ನು ಮುಂದೆ ಬಿಬಿಎಂಪಿಯಲ್ಲಿ ಅಭಿವೃದ್ದಿ ಕಾರ್ಯಗಳ ಪರ್ವ ಆರಂಭವಾಗಲಿದೆ.ಜನತೆಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕೆಂದು ಸೂಚಿಸಿದರು.

ಮುಂದಿನ ವರ್ಷ ಪಾಲಿಕೆ ಚುನಾವಣೆ ಬರಲಿದೆ. ನೀವು ಪ್ರಾಮಾಣಿಕವಾಗಿ ಆಡಳಿತ ನಡೆಸಿದರೆ ಕನಿಷ್ಟ 125ರಿಂದ 150 ಸ್ಥಾನಗಳನ್ನು ಗೆಲ್ಲಬಹುದು. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕೆಂದು ಸಲಹೆ ಮಾಡಿದರು.
ಬಿಬಿಎಂಪಿಯಲ್ಲಿ ನಮ್ಮ ಪಕ್ಷದವರೇ ಮೇಯರ್ ಮತ್ತು ಉಪಮೇಯರ್ ಆಗಿರುವುದ ಅತ್ಯಂತ ಸಂತೋಷದ ಸಂಗತಿ.ಇದರಿಂದ ಪಕ್ಷದ ಕಾರ್ಯಕರ್ತರು, ಬೆಂಗಳೂರಿನ ಮಹಾನಜನತೆಗೂ ಖುಷಿಯಾಗಿದೆ.ವಿಶೇಷವಾಗಿ ಈ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸಚಿವ ಆರ್.ಅಶೋಕ್ ಸೇರಿದಂತೆ ಎಲ್ಲ ಮುಖಂಡರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದಕ್ಕೂ ಮುನ್ನ ನೂತನ ಮೇಯರ್ ಗೌತಮ್‍ಕುಮಾರ್ ಜೈನ್ ಮತ್ತು ಮೋಹನ್‍ರಾಜ್ ಬಿಎಸ್‍ವೈಗೆ ಶಾಲು ಹೊದಿಸಿ ಸನ್ಮಾನಿಸಿದರು.ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಕೂಡ ಅಭಿನಂದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ