ಬೆಂಗಳೂರು, ಅ.2- ಪ್ರಧಾನಿ ನರೇಂದ್ರ ಮೋದಿ ಅವರು ದೇವರು ಇದ್ದಂತೆ.ಅವರನ್ನು ಟೀಕಿಸಿದರೆ ದೇವರನ್ನು ಟೀಕಿಸಿದಂತೆ ಎಂದು ಸಂಸದ ಪ್ರತಾಪ್ಸಿಂಹ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ನೆರೆ ಸಂತ್ರಸ್ತರಿಗೆ ಸ್ಪಂದಿಸಲು ಪ್ರಧಾನಿಗೆ ಹೇಳಿ ಎಂದು ತಿರುಗೇಟು ನೀಡಿದ್ದಾರೆ.
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದ್ಭಾವನಾ ಯಾತ್ರೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕರು, ಪ್ರತಾಪ್ಸಿಂಹ ಹೇಳಿಕೆಯನ್ನು ಖಂಡಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಿಜೆಪಿಯವರಿಗೆ ಮೋದಿ ದೇವರಾಗಿಯೇ ಇರಲಿ. ಅವರು ಬೇಕಾದರೆ ಪೂಜೆ ಮಾಡಿಕೊಳ್ಳಲಿ.ಆದರೆ, ನೆರೆಯಿಂದ ನಮ್ಮ ಜನ ಸಂಕಷ್ಟದಲ್ಲಿದ್ದಾರೆ.ಮೊದಲು ಅವರ ಸಮಸ್ಯೆಗೆ ಸ್ಪಂದಿಸಲಿ.ಬಿಜೆಪಿಯಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಂತೆ ಪ್ರಧಾನಿಯವರನ್ನು ಕೇಳುವ ಧೈರ್ಯ ಮಾಡಲಿ ಎಂದು ಲೇವಡಿ ಮಾಡಿದ್ದಾರೆ.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಪ್ರತಾಪ್ಸಿಂಹ ಅವರ ಹೇಳಿಕೆ ಬೇಜವಾಬ್ದಾರಿಯುತವಾದದ್ದು, ಉತ್ತರ ಕರ್ನಾಟಕದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಜಾನುವಾರುಗಳೂ ಬಲಿಯಾಗಿವೆ. ಬೆಳೆ ನಾಶವಾಗಿದೆ. ಜನ ನೆಲೆ ಕಳೆದುಕೊಂಡಿದ್ದಾರೆ. ದೇವರೆಂದು ಬಿಜೆಪಿಯವರು ಹೇಳುವ ಪ್ರಧಾನಿಯವರು ಮೊದಲು ಕಷ್ಟದಲ್ಲಿರುವವರ ನೆರವಿಗೆ ಧಾವಿಸಲಿ ಎಂದಿದ್ದಾರೆ.
ಈವರೆಗೂ ಪ್ರಧಾನಿ ಅವರು ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿಲ್ಲ. ಅವರ ವರ್ತನೆ ಬೇಜವಾಬ್ದಾರಿಯುತವಾಗಿದೆ. ಜನರ ಕಣ್ಣೀರು ಒರೆಸಿಲ್ಲ. ನೆರವು ಕೇಳಲು ಹೋದ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಸಮಯ ಕೊಟ್ಟಿಲ್ಲ. ಅಂತಹವರನ್ನು ದೇವರೆಂದು ಕರೆದುಕೊಳ್ಳುತ್ತಿದ್ದಾರೆ. ಬಿಹಾರದ ನೆರೆ ಹಾವಳಿಗೆ ಅನುಕುಂಪ ವ್ಯಕ್ತಪಡಿಸಿರುವ ಮೋದಿ, ಕರ್ನಾಟಕ ವಿಷಯದಲ್ಲಿ ಮಾತನಾಡಿಲ್ಲ. ದೇವರು, ದೇವಮಾನವ ಅನ್ನುವುದನ್ನು ಬಿಜೆಪಿಯವರು ಬಿಡಲಿ.ಅದೆಲ್ಲ ನಮ್ಮ ದೇಶದಲ್ಲಿ ನಡೆಯುವುದಿಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಮಾತನಾಡಿ, ಪ್ರತಾಪ್ಸಿಂಹ ಭಟ್ಟಂಗಿ ರಾಜಕಾರಣ ಮಾಡುತ್ತಿದ್ದಾರೆ.ಮೋದಿ ಜನವಿರೋಧಿ, ರೈತ ವಿರೋಧಿ. ಇಲ್ಲಿ ಯಾರೂ ದೇವರಾಗಲು ಸಾಧ್ಯವಿಲ್ಲ. ಜನರ ಭಾವನೆಗಳ ಜೊತೆ ಆಟವಾಡುವ ಬಿಜೆಪಿಯವರ ಹೇಳಿಕೆಗಳೂ ಖಂಡನೀಯ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಾಪ್ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಯಾವ ಸಿಂಹ ನಡೀರಪ್ಪ ಎಂದು ಹೇಳಿ ತಿರಸ್ಕಾರದಿಂದ ನಡೆದರು.