
ಬೆಂಗಳೂರು, ಅ.2-ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸಿದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಸನ್ಮಾರ್ಗದಲ್ಲಿ ನಡೆದರೆ ಎಲ್ಲಾ ಸಮಸ್ಯೆಗಳು ತಂತಾನೇ ದೂರವಾಗುತ್ತವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜಯಂತಿ ಪ್ರಯುಕ್ತ ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಪದಗ್ರಹಣ ಮತ್ತು ಮಹಾತ್ಮಗಾಂಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾತ್ಮಗಾಂಧೀಜಿಯವರು ಅಂದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಇಂದು ನಾವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ. ಅಂತಹ ಮಹಾತ್ಮನ ಸನ್ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಇಂದು ಮಹಾತ್ಮಗಾಂಧೀಜಿಯವರ ಹುಟ್ಟಿದ ದಿನ. ಜೊತೆಗೆ ದೇಶದ ಮತ್ತೊಬ್ಬ ಧೀಮಂತ ನಾಯಕ ಲಾಲ್ಬಹದ್ದೂರ್ ಶಾಸ್ತ್ರೀಯವರ ಹುಟ್ಟಿದ ದಿನವೂ ಹೌದು.ಇಂತಹ ಧೀಮಂತರ ಉದಾತ್ತ ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹಿರಿಯ ಧುರೀಣ ಎಸ್.ಎಂ.ಕೃಷ್ಣ ಮಾತನಾಡಿ, ನಾನು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರನ್ನು ನನ್ನ ಜೀವಿತಾವಧಿಯಲ್ಲಿ ಎರಡು ಬಾರಿ ನೋಡಿದ್ದೆ. ಇದು ಪೂರ್ವ ಜನ್ಮದ ಪುಣ್ಯವೋ, ನನ್ನ ತಂದೆ-ತಾಯಿ ಆಶೀರ್ವಾದವೋ ಗೊತ್ತಿಲ್ಲ. ಅಂತಹ ಮಹಾತ್ಮನ ದರ್ಶನ ಪಡೆದ ನಾನೇ ಧನ್ಯ ಎಂದು ಬಣ್ಣಿಸಿದರು.
ಅಹಿಂಸೆ ಮತ್ತು ಶಾಂತಿಯಿಂದ ಜಗತ್ತನ್ನೇ ಗೆಲ್ಲಬಹುದೆಂದು ತೋರಿಸಿಕೊಟ್ಟ ಏಕೈಕ ನಾಯಕರೆಂದರೆ ಅದು ಮಹಾತ್ಮಗಾಂಧಿ. ಅವರ ತತ್ವಾದರ್ಶಗಳು, ಚಿಂತನೆಗಳು ಸೂರ್ಯ-ಚಂದ್ರರಿರುವರೆಗೂ ಇರುತ್ತವೆ ಎಂದು ಹೇಳಿದರು.
ಗಾಂಧಿಯವರ ಆದರ್ಶಗಳು ದೇಶ-ವಿದೇಶದಲ್ಲೂ ಪರಿಣಾಮ ಬೀರಿದ್ದವು. ಅಮೆರಿಕದಲ್ಲಿ ಗಾಂಧೀಜಿಯವರಿಂದ ಪ್ರೇರೇಪಿತರಾದ ಮಾರ್ಟಿನ್ ಲೂಥರ್ ಕಿಂಗ್ ವರ್ಣಭೇದ ನೀತಿ ವಿರುದ್ಧ ಹೋರಾಡಿದರು ಎಂದು ಸ್ಮರಿಸಿದರು.
ಹೀಗೆ ಪ್ರಪಂಚದ ನಾನಾ ಭಾಗಗಳಲ್ಲಿ ಗಾಂಧಿಯವರಿಂದ ಪ್ರೇರಣೆ ಪಡೆದ ಅನೇಕರು ಹೋರಾಟ ಮಾಡಿದ್ದಾರೆ.ಇಂದಿನ ಸಮಾಜ ಅವರು ನಡೆದು ಬಂದ ಹಾದಿಯನ್ನು ಅಳವಡಿಸಿಕೊಂಡರೆ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಸಾಮಾನ್ಯವಾಗಿ ರಾಜಕಾರಣಿಗಳೆಂದರೆ ಸತ್ಯ ಹೇಳುವುದಿಲ್ಲ ಎಂಬ ಅಭಿಪ್ರಾಯವಿದೆ.ಸುಳ್ಳು ಹೇಳಿಕೊಂಡು ರಾಜಕಾರಣಿಗಳು ಬದುಕುತ್ತಾರೆ ಎಂಬ ಮಾತು ಸಾರ್ವತ್ರಿಕವಾಗಿದೆ.ಕಡೇ ಪಕ್ಷ ಇಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹುಟ್ಟಿದ ದಿನವಾದ ಇಂದು ನಾವೆಲ್ಲರೂ ಸತ್ಯವನ್ನೇ ನುಡಿಯುತ್ತೇವೆ ಎಂಬ ಪ್ರಮಾಣ ಮಾಡೋಣ ಎಂದರು.
ಇನ್ನು ಮುಂದಾದರೂ ಸತ್ಯ ಅಲ್ಲದಿದ್ದರೂ, ಸತ್ಯಕ್ಕೆ ಹತ್ತಿರವಾದುದ್ದನ್ನು ನುಡಿಯೋಣ. ಮತ್ತೊಬ್ಬರಿಗೆ ಹಿಂಸೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡೋಣ. ನಾವು ಮತ್ತೊಬ್ಬರಿಗೆ ಹಿಂಸೆ ಕೊಟ್ಟು ರಾಜಕಾರಣ ಮಾಡುವವರು.ಇದಕ್ಕೆ ಇಂದಿನಿಂದ ಮುಕ್ತಿ ಹಾಡೋಣ ಎಂದರು.
ಆಧ್ಯಾತ್ಮಿಕ ಚಿಂತಕ ವಿನಯ್ಗುರೂಜೀ ಮಾತನಾಡಿ, ಮಹಾತ್ಮಗಾಂಧೀಜಿಯವರ ತತ್ತ್ವಾದರ್ಶಗಳನ್ನು ಅಳವಡಿಸಿಕೊಂಡರೆ ನಾಗರಿಕ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ದೂರವಾಗಲಿವೆ. ಇಂದು ಆಟೋಬಾಂಬ್ ಎಲ್ಲಿ ಬೀಳುತ್ತದೋ ಎಂಬ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.ಏಕೆಂದರೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಸೂಯೆ.ನಮ್ಮಲ್ಲಿರುವ ದುರ್ಗುಣಗಳನ್ನು ತೊಡೆದು ಹಾಕದಿದ್ದರೆ ಸಮಾಜ ಶಾಂತಿಯಿಂದಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು. ನಾನು , ನನ್ನಿಂದಲೇ ಎಂಬ ಅಹಂಕಾರ ಹೋಗಬೇಕು. ಹಣದಿಂದಲೇ ಎಲ್ಲವನ್ನೂ ಅಳೆಯುವ ಮನೋಭಾವ ಬಿಡಬೇಕು. ನಮಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಸ್.ಎಂ.ಕೃಷ್ಣ, ಪ್ರಧಾನಿ ನರೇಂದ್ರ ಮೋದಿ, ಸಾಲು ಮರದ ತಿಮ್ಮಕ್ಕನಂತಹವರು ಆದರ್ಶರಾಗಬೇಕೆಂದು ಕರೆ ನೀಡಿದರು.
ನೀವು ಅನಗತ್ಯವಾಗಿ ಮಾಡುವ ದುಂದುವೆಚ್ಚಗಳಿಗೆ ಮೊದಲು ಕಡಿವಾಣ ಹಾಕಿ.ಒಂದಿಷ್ಟು ಸಮಾಜ ಸೇವೆಗಳಿಗೆ ಹಾಗೂ ಅಸಹಾಯಕರಿಗೆ ಇಂತಿಷ್ಟು ಹಣ ದಾನ ಮಾಡಿ ಎಂದು ಕಿವಿ ಮಾತು ಹೇಳಿದರು.
ಭೂಮಿಯ ಮೇಲೆ ನಮಗೆ ಒಳ್ಳೆಯ ಗಾಳಿ ಸಿಗುವುದೇ ದುಸ್ತರವಾಗಿದೆ. ಅಂಥದ್ದರಲ್ಲಿ ಸಾಲುಮರದ ತಿಮ್ಮಕ್ಕನವರು ಗಿಡ-ಮರಗಳನ್ನು ಬೆಳೆಸಿ ನಾಗರಿಕ ಸಮಾಜಕ್ಕೆ ಪರೋಪಕಾರಿಯಾಗಿದ್ದಾರೆ. ಅಂತಹವರಿಗೆ ಸ್ವಯಂಪ್ರೇರಿತರಾಗಿ ಆರ್ಥಿಕವಾಗಿ ಸಹಾಯ ಮಾಡಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಒಂದು ಲಕ್ಷ ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.