ಸರ್ಕಾರದಿಂದ ಅನುದಾನ ಕಡಿತ ಹಿನ್ನಲೆ-ಪ್ತತಿಭಟನೆ ನಡೆಸಿದ ಶಾಸಕರಾದ ರಾಮಲಿಂಗಾ ರೆಡ್ಡಿ, ಸೌಮ್ಯಾ ರೆಡ್ಡಿ

ಬೆಂಗಳೂರು,ಸೆ.29- ಜಯನಗರ ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಿದ್ದ ಅನುದಾನದಲ್ಲಿ 243.59 ಕೋಟಿ ರೂ.ಗಳಷ್ಟು ಕಡಿತ ಮಾಡಿರುವ ಸರ್ಕಾರದ ಕ್ರಮ ವಿರೋಧಿಸಿ ಜಯನಗರದಲ್ಲಿ ಇಂದು ಶಾಸಕರಾದ ರಾಮಲಿಂಗಾ ರೆಡ್ಡಿ, ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಯನಗರದ 4ನೇ ಬ್ಲಾಕ್ ವಾಣಿಜ್ಯ ಸಂಕೀರ್ಣದ ಬಳಿ ಪ್ರತಿಭಟನೆ ನಡೆಸಿದ ಶಾಸಕರು, ಸಾರ್ವಜನಿಕರು ಸರ್ಕಾರದ ಕ್ರಮವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ 2018-19ನೇ ಸಾಲಿನ ಫೆಬ್ರವರಿ 1ರಂದು ನಡೆದ ಮೈತ್ರಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಜಯನಗರ, ಬಿಟಿಎಂ ವಿಧಾನಸಭಾ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ 387 ಕೋಟಿ ರೂ.ಗಳನ್ನು ಮೀಸಲಿರಸಲಾಗಿತ್ತು. ಪ್ರಸ್ತುತ ಸರ್ಕಾರ 143.41 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿ ಸುಮಾರು 243.59 ಕೋಟಿ ರೂ.ಗಳನ್ನು ಕಡಿತ ಮಾಡಿ ತಾರತಮ್ಯವೆಸಗಿದೆ. ಅಷ್ಟೇ ಅಲ್ಲದೇ ಪ್ರಸಕ್ತ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ಮೀಸಲಿಟ್ಟಿದ್ದ ಅನುದಾನದಲ್ಲಿ ಈ ಕ್ಷೇತ್ರಗಳಿಗೆ ಶೇ. 50ರಷ್ಟನ್ನು ಕಡಿತಗೊಳಿಸಿ ಅನ್ಯಾಯ ಮಾಡಿ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ ಎಂದು ಆರೋಪಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ರಾಣಿ ಚೆನ್ನಮ್ಮ ಕ್ರೀಡಾಂಗಣದ ಅಭಿವೃದ್ಧಿಗೆ ಮೀಸಲಿರಿಸಿದ್ದ 5 ಕೋಟಿಯನ್ನು ಕೂಡ ಹಿಂಪಡೆಯಲಾಗಿದೆ. ಏಷ್ಯಾದಲ್ಲೇ ನಂ.1 ಆಗಿರುವ ಜಯನಗರದ ವಾಣಿಜ್ಯ ಸಂಕೀರ್ಣದ ಸಂಪೂರ್ಣ ಅಭಿವೃದ್ಧಿಗಾಗಿ ಮೀಸಲಿರಿಸಿದ್ದ ಸುಮಾರು 50 ಕೋಟಿಯಲ್ಲಿ 35 ಕೋಟಿಯಷ್ಟು ಅನುದಾನ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ತಮ್ಮ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕೊಟ್ಟು ಬೇರೆ ಪಕ್ಷದ ಶಾಸಕರ ಅನುದಾನವನ್ನು ಕಸಿದುಕೊಂಡು ಅನ್ಯಾಯ ಮಾಡಿದೆ ಎಂದರು.

ಈ ತಾರತಮ್ಯವನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಸ್ಥಳೀಯ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ