
ಬೆಂಗಳೂರು, ಸೆ.30- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಅ.14ಕ್ಕೆ ಮುಂದೂಡಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಇನ್ನೂ 14 ದಿನಗಳ ಕಾಲ ಜೈಲಿನಲ್ಲಿರುವ ಅನಿವಾರ್ಯತೆ ಎದುರಾಗಿದೆ.
ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ಆಸ್ತಿಗಳಿಗೆ ಸಂಬಂಧಪಟ್ಟಂತೆ ಸೆ.3ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರು. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಜಯ್‍ಕುಹರ್ ಕುಮಾರ್ ಅವರು ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು.
ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ದೆಹಲಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದರು. ಇಂದು ವಿಚಾರಣೆ ಕೈಗೆತ್ತಿಗೊಂಡ ನ್ಯಾಯಮೂರ್ತಿ ಸುರೇಶ್‍ಕುಮಾರ್ ಅವರು ಅ. 14ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಿದ್ದಾರೆ.
ಹೀಗಾಗಿ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಸದ್ಯಕ್ಕೆ ಹೊರಬರುವ ಸಾಧ್ಯತೆ ಕಾಣುತ್ತಿಲ್ಲ. ಡಿ.ಕೆ.ಶಿವಕುಮಾರ್ ಅವರ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಮುಕುಲ್ ರೋಹ್ಟಗಿ, ದಯಾನ್‍ಕೃಷ್ಣನ್ ಅವರು ವಾದಿಸಲು ಮುಂದಾಗಿದ್ದರು.
ಈ ಹಿಂದೆ ಜಾರಿನಿರ್ದೇಶನಾಲಯದ ನ್ಯಾಯಾಲಯದಲ್ಲಿ ವಾದ-ವಿವಾದಗಳು ನಡೆದಾಗ ಡಿ.ಕೆ.ಶಿವಕುಮಾರ್ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಅವರಿಗೆ ಜಾಮೀನು ಕೊಟ್ಟರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಇಡಿ ಅಧಿಕಾರಿಗಳು ವ್ಯಕ್ತಪಡಿಸಿದ್ದರು.
ಡಿ.ಕೆ.ಶಿವಕುಮಾರ್ ಮತ್ತು ಅವರ ಆಪ್ತರಿಂದ 317 ಖಾತೆಗಳಿಂದ ಹಣ ವರ್ಗಾವಣೆಯಾಗಿದೆ. ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಬಾರದೆಂದು ವಾದಿಸಿತ್ತು. ಇದನ್ನು ಆಧರಿಸಿ ಕೆಳ ಹಂತದ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿತ್ತು.
ಹೈಕೋರ್ಟ್‍ನಲ್ಲಿ ಈ ಆಕ್ಷೇಪಗಳಿಗೆ ಪ್ರತ್ಯುತ್ತರ ನೀಡುವ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡುಬೇಕೆಂದು ಮನವಿ ಮಾಡಲು ವಕೀಲರು ಮುಂದಾಗಿದ್ದರು. ಆದರೆ, ವಿಚಾರಣೆ ದಿಢೀರ್ ಮುಂದೂಡಿಕೆಯಾಗಿದೆ.