ಏಕವಚನದಲ್ಲಿ ಪರಸ್ಪರ ನಿಂದಿಸಿಕೊಂಡಿದ್ದೇವೆ ಎಂಬುದು ಸುಳ್ಳು ವದಂತಿ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.30- ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ನಾನು ಸ್ನೇಹಿತರು. ಏಕವಚನದಲ್ಲಿ ಪರಸ್ಪರ ನಿಂದಿಸಿಕೊಂಡಿದ್ದೇವೆ ಎಂಬುದು ಸುಳ್ಳು ವದಂತಿ ಎಂದು ಸ್ಪಷ್ಟಪಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರೋಧಿಗಳ ಭಿನ್ನಾಭಿಪ್ರಾಯವನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಮುನಿಯಪ್ಪ ಮತ್ತು ಸಿದ್ದರಾಮಯ್ಯ ನಡುವೆ ಏರಿದ ಧ್ವನಿಯಲ್ಲಿ ಮಾತುಕತೆಗಳಾಗಿದ್ದವು. ಪರಸ್ಪರ ಇಬ್ಬರೂ ನಾಯಕರು ಏಕವಚನ ಬಳಸುವ ಮೂಲಕ ಜಗಳವಾಡಿದ್ದರು ಎಂಬ ವದಂತಿಗಳು ಹಬ್ಬಿದ್ದವು.

ಕೆ.ಎಚ್.ಮುನಿಯಪ್ಪ ಅವರು ಇದಕ್ಕೆ ಸ್ಪಷ್ಟನೆ ನೀಡಿ ನಾನು ಯಾರ ವಿರುದ್ಧವೂ ಏಕ ವಚನ ಬಳಸಿಲ್ಲ ಎಂದಿದ್ದರು. ಈಗ ಸಿದ್ದರಾಮಯ್ಯ ಕೂಡ ನಾವಿಬ್ಬರೂ ಏಕವಚನ ಪ್ರಯೋಗ ಮಾಡಿಕೊಂಡಿಲ್ಲ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕೇಳಿಬಂದಿರುವ ಅಪಸ್ವರಗಳನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

ಕಾಂಗ್ರೆಸ್‍ನಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಅವರ ಬಣದ ಕೈ ಮೇಲಾಗುತ್ತಿದೆ ಎಂಬ ಕಾರಣಕ್ಕೆ ಮೂಲ ಕಾಂಗ್ರೆಸಿಗರು ಸಿಟ್ಟಿಗೆದ್ದಿದ್ದು, ಸಿದ್ದು ಬಣದ ವಿರುದ್ಧ ಸಮರ ಸಾರಿದ್ದರು. ಇದರಿಂದಾಗಿ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರ ಹಿಡಿಯುವ ಕನಸಿಗೆ ಸಾಕಷ್ಟು ಅಡ್ಡಿಗಳು ಎದುರಾಗಿವೆ.

ಕಾಂಗ್ರೆಸ್ ನಾಯಕರ್ಯಾರೂ ಅಸಮಾಧಾನದ ಬಗ್ಗೆ ಬಹಿರಂಗ ಹೇಳಿಕೆ ನೀಡದಿದ್ದರೂ ರಾಜೀನಾಮೆ ನೀಡಿ ಹೊರ ಹೋಗಿರುವ ಅನರ್ಹ ಶಾಸಕರು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಮೂಲ ಕಾಂಗ್ರೆಸಿಗರ ಭಾವನೆಗಳನ್ನು ಹೊರ ಹಾಕಲಾರಂಭಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ವಿರುದ್ಧ ಕೇಳಿ ಬಂದಿರುವ ಟೀಕೆಗಳಿಗೆ ಇತರ ಕಾಂಗ್ರೆಸ್ ನಾಯಕರು ತಿರುಗೇಟು ನೀಡುವ ಪ್ರಯತ್ನ ಮಾಡಿಲ್ಲ. ಅದರ ಅರ್ಥ ಮೂಲ ನಿವಾಸಿಗಳ ಒಳ ಬೇಗುದಿಗೆ ಅನರ್ಹರು ದನಿಯಾಗಿದ್ದಾರೆ ಎಂದೇ ಭಾವಿಸಲಾಗಿತ್ತು.

ತೆರೆಮರೆಯಲ್ಲಿ ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅವರನ್ನು ಪದಚ್ಯುತಗೊಳಿಸಿ ಪರ್ಯಾಯ ನಾಯಕತ್ವವನ್ನು ಬೆಳೆಸಲು ಅಥವಾ ಮೂಲ ಕಾಂಗ್ರೆಸಿಗರಿಗೆ ಪಟ್ಟ ಕಟ್ಟಲು ಪ್ರಯತ್ನಗಳು ನಡೆದಿದ್ದವು.

ಈ ಸಲುವಾಗಿ ಬಹಳಷ್ಟು ಮಂದಿ ಮೂಲ ಕಾಂಗ್ರೆಸಿಗರು ಒಗ್ಗಟ್ಟಾಗಿ ಅಲ್ಲಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಪರಮೇಶ್ವರ್ ದೆಹಲಿಗೆ ತೆರಳಿದ್ದಾಗ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮನೆಯಲ್ಲಿ ಔತಣ ಕೂಟದ ನೆಪದಲ್ಲಿ ಸಭೆ ಕೂಡ ನಡೆದಿತ್ತು.

ಬೆಂಗಳೂರಿನಲ್ಲೂ ಎರಡು-ಮೂರು ಬಾರಿ ಸಭೆ ಸೇರಿ ಚರ್ಚೆ ನಡೆಸಲಾಗಿದೆ. ದಿನೇಶ್‍ಗುಂಡೂರಾವ್ ಮೂಲ ಕಾಂಗ್ರೆಸಿಗರಾಗಿದ್ದು, ಸಿದ್ದರಾಮಯ್ಯ ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಪಕ್ಷ ಹೈಜಾಕ್ ಆಗಿದೆ. ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡಿ ಸಿದ್ದರಾಮಯ್ಯ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಸಿದ್ದರಾಮಯ್ಯ ಹೊರತುಪಡಿಸಿದರೆ ಕಾಂಗ್ರೆಸ್‍ನಲ್ಲಿ ಯಾವ ನಾಯಕರೂ ಇಲ್ಲ ಎಂಬಂತೆ ಬಿಂಬಿಸಲಾಗಿದೆ. ನಾವು ಇನ್ನೂ ತಾಳ್ಮೆಯಿಂದ ಇದ್ದರೆ ಸಿದ್ದರಾಮಯ್ಯ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗುತ್ತಾರೆ. ಮೂಲ ಕಾಂಗ್ರೆಸಿಗರು ಕೇವಲ ಚಾಕರಿ ಮಾಡಿಕೊಂಡು ಇರಬೇಕಾಗುತ್ತದೆ ಎಂಬ ಖಾರವಾದ ಮಾತುಗಳು ಇತ್ತೀಚಿನ ಸಭೆಗಳಲ್ಲಿ ಕೇಳಿ ಬಂದಿವೆ.

ಈ ಎಲ್ಲಾ ತೆರೆಮರೆಯ ಚಟುವಟಿಕೆಗಳಿಂದ ಎಚ್ಚರಗೊಂಡಿರುವ ಸಿದ್ದರಾಮಯ್ಯ ಅವರು ಹಂತ ಹಂತವಾಗಿ ಮೂಲ ಕಾಂಗ್ರೆಸಿಗರ ಜತೆ ರಾಜೀಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಹಾಗಾಗಿಯೇ ಮುನಿಯಪ್ಪ ಮತ್ತು ನನ್ನ ನಡುವೆ ಯಾವುದೇ ಸಂಘರ್ಷ ಇಲ್ಲ. ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಒಡಕುಗಳು ಇಲ್ಲ. ಪಕ್ಷದಲ್ಲಿ ಯಾರನ್ನು ಯಾರು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ನಮ್ಮಿಬ್ಬರ ನಡುವೆ ಪರಸ್ಪರ ದ್ವೇಷಿಸುವಂತಹ ಯಾವ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಹೇಳುವ ಮೂಲಕ ಪರಮೇಶ್ವರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿ, ಮುನಿಯಪ್ಪ ಅವರ ಜತೆಗಿನ ವೈರತ್ವವನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ