ಬೆಂಗಳೂರು,ಸೆ.30- ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೊಳಿಸಲು ವಿವಿಧ ಸರ್ಕಾರಗಳು ಯತ್ನಿಸಿದರೂ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಇದೀಗ ಮತ್ತೆ ಬಿಜೆಪಿ ಸರ್ಕಾರ ಹೊಸ ಮರಳು ನೀತಿಯ ಮಂತ್ರ ಪಠಿಸುತ್ತಿದೆ.
ಅಕ್ರಮ ಮರಳುಗಾರಿಕೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಅದರ ಲಾಬಿ ಸರ್ಕಾರ, ಅಧಿಕಾರಿ ವರ್ಗಗಳ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ವಿಸ್ತರಿಸಿದೆ. ಈಗಾಗಲೇ ಹಲವು ಸರ್ಕಾರಗಳು ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಸರಳವಾಗಿ ಗುಣಮಟ್ಟದ ಮರಳು ಸಿಗುವಂತೆ ಹೊಸ ಮರಳು ನೀತಿ ತರಲು ಚಿಂತನೆ ನಡೆಸಿದೆ.
ಈ ಹಿಂದಿನ ಸರ್ಕಾರಗಳ ಮರಳು ನೀತಿ ಮಂತ್ರ:
ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಮರಳು ನೀತಿ ಜಾರಿಗೆ ತರಲು ನಿರ್ಧರಿಸಿದ್ದರು. ಅದರಂತೆ 2014ರಲ್ಲಿ ಮರಳು ನೀತಿಯನ್ನು ಪ್ರಕಟಿಸಿದ್ದರು. ಅದರಲ್ಲಿ ಅಕ್ರಮ ಮರಳುಗಾರಿಕೆ ನಿಯಂತ್ರಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿತ್ತು.
ಜಿಲ್ಲಾ ಸಮಿತಿಗಳಿಗೆ ಮರಳು ದರ ನಿಗದಿ ಮಾಡುವ ಅಧಿಕಾರ ನೀಡಲಾಗಿದ್ದರೆ, ತಾಲೂಕು ಸಮಿತಿಗಳು ಮರಳು ಬ್ಲಾಕ್ ಗಳನ್ನು ಗುರುತಿಸಿ, ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆದು ಮರಳು ಗಣಿಗಾರಿಕೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಈ ನೀತಿ ಅನುಕೂಲಕಾರಿಯಾಗಿರಲಿಲ್ಲ. ಹೀಗಾಗಿ ಬಳಿಕ ಬಂದ ಮೈತ್ರಿ ಸರ್ಕಾರವೂ ಹೊಸ ಮರಳು ನೀತಿ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು.
ಆ ನಿಟ್ಟಿನಲ್ಲಿ ಅಂದಿನ ಡಿಸಿಎಂ ಪರಮೇಶ್ವರ್ ನೇತೃತ್ವದ ಸಂಪುಟ ಉಪಸಮಿತಿ ರಚಿಸಲಾಗಿತ್ತು. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ತಮಿಳುನಾಡು ಮಾದರಿ ಮರಳುಗಾರಿಕೆಯ ಅಧ್ಯಯನ ನಡೆಸಲು ಈ ಐದು ರಾಜ್ಯಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿತ್ತು. ಬಳಿಕ ತೆಲಂಗಾಣ ಮಾದರಿ ಮರಳು ನೀತಿಯನ್ನು ಜಾರಿಗೆ ತರಲು ಮೈತ್ರಿ ಸರ್ಕಾರ ಚಿಂತನೆ ನಡೆದಿತ್ತು. ಆದರೆ ಅಂತಿಮ ತೀರ್ಮಾನ ಕೈಗೊಳ್ಳಲು ವಿಫಲವಾಗಿತ್ತು.
ಆಂಧ್ರಕ್ಕೆ ಅಧ್ಯಯನ ತಂಡ: ಹೊಸ ಬಿಜೆಪಿ ಸರ್ಕಾರ ಇದೀಗ ಆಂಧ್ರಾ ಮಾದರಿಯ ಮರಳು ನೀತಿ ಜಾರಿಗೆ ತರಲು ಒಲವು ತೋರಿದ್ದು, ಈ ಸಂಬಂಧ ಆಂದ್ರಪ್ರದೇಶಕ್ಕೆ ಅಧ್ಯಯನ ತಂಡ ಕಳುಹಿಸಲು ನಿರ್ಧರಿಸಿದೆ.
ಆದರೆ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲೂ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿ ವರದಿ ನೀಡಲಾಗಿತ್ತು. ಈಗ ವರದಿ ಏನಾಗಿದೆ ಎಂಬ ಅನುಮಾನ ಮೂಡಿದೆ.
ಮರಳು ಗಣಿಗಾರಿಕೆ ಅಧ್ಯಯನ ಹೆಸರಲ್ಲಿ ಪದೇ ಪದೆ ನೆರೆ ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿ, ರಾಜ್ಯದ ಬೊಕ್ಕಸದ ಹಣ ಪೋಲು ಮಾಡಲಾಗುತ್ತಿದೆ ಎಂಬ ಕೂಗು ಸಹ ಕೇಳಿ ಬಂದಿದೆ. ಅಧಿಕಾರಿಗಳು ಅಧ್ಯಯನ ಹೆಸರಲ್ಲಿ ಪ್ರವಾಸ ಕೈಗೊಳ್ಳುತ್ತಾರೆಯೇ ಹೊರತು ಬೇರೆ ಯಾವುದೇ ಲಾಭವಾಗುತ್ತಿಲ್ಲ.
ರಾಜ್ಯದಲ್ಲಿ ವ್ಯಾಪಕ ಅಕ್ರಮ ಮರಳುಗಣಿಗಾರಿಕೆ ಮುಂದುವರಿಯುತ್ತಲೇ ಇದೆ. ಅದರ ನಿಯಂತ್ರಣ ಮಾತ್ರ ಮರೀಚಿಕೆಯಾಗೇ ಉಳಿದಿದೆ.
ರಾಜ್ಯದಲ್ಲಿ ಸುಮಾರು 45 ದಶಲಕ್ಷ ಮೆಟ್ರಿಕ್ ಟನ್ ಮರಳು ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಸುಮಾರು 65 ದಶಲಕ್ಷ ಮೆಟ್ರಿಕ್ ಟನ್ ಮರಳಿಗೆ ಬೇಡಿಕೆ ಇದೆ.
2015-2019ರವರೆಗೆ ರಾಜ್ಯಾದ್ಯಂತ ಸುಮಾರು 25,000 ಅಕ್ರಮ ಮರಳುಗಾರಿಕೆ ಪ್ರಕರಣ ದಾಖಲಿಸಲಾಗಿದ್ದು, 11,000 ಎಫ್ ಐಆರ್ ದಾಖಲಿಸಾಗಿದೆ.
ರಾಜ್ಯ ಸರ್ಕಾರ ಅಧಿಕೃತ ಮರಳು ಬ್ಲಾಕ್ ಗಳಿಂದ ವಾರ್ಷಿಕ ಸುಮಾರು 185 ಕೋಟಿ ರೂ. ರಾಜ ಧನವನ್ನು ಸಂಗ್ರಹಿಸುತ್ತಿದೆ. ಅಕ್ರಮ ಮರಳುಗಾರಿಕೆಯಿಂದ ವಾರ್ಷಿಕ ಸುಮಾರು 230 ಕೋಟಿ ರೂ. ನಷ್ಟ ಅನುಭವಿಸುತ್ತಿದೆ.
2015ರಿಂದ 2018ರವರೆಗಿನ ಮರಳು ಪ್ರಕರಣಗಳಲ್ಲಿ ಅಕ್ರಮ ಮರಳುಗಾರಿಕೆ -1530, ಅಕ್ರಮ ಮರಳು ಸಾಗಣಿಕೆ -18510, ಅಕ್ರಮ ಮರಳು ಸಂಗ್ರಹ -435, ಫಿಲ್ಟರ್ ಮರಳು -304 ಪ್ರಕರಣಗಳು ನಡೆದಿದ್ದು, ಒಟ್ಟು 9,600 ಎಫ್ ದಾಖಲಾಗಿ 44.15 ಕೋಟಿ ರೂ. ದಂಡ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.