ರಾಯಚೂರು; “ಸಿಎಂ ಯಡಿಯೂರಪ್ಪನವರೇ ಸುಮ್ಮನೆ ಏಕೆ ತಂತಿಯ ಮೇಲೆ ನಡೆಯುತ್ತಿದ್ದೀರಿ? ತಂತಿಯ ಮೇಲೆ ನಡೆದರೆ ಬಿದ್ದು ಹೋಗ್ತೀರ. ಹೀಗೆ ಅಧಿಕಾರ ಚಲಾಯಿಸಲು ಸುಮ್ಮನೆ ರಾಜೀನಾಮೆ ಕೊಟ್ಟು ನಡೆಯಿರಿ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟಕಿಯಾಡಿದ್ದಾರೆ.
ಇಂದು ನೆರೆ ಪರಿಹಾರ ವೀಕ್ಷಣೆಗೆ ರಾಯಚೂರು ತೆರಳಿದ್ದ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಸಿಎಂ ಯಡಿಯೂರಪ್ಪನವರ ಕಾಲೆಳೆದಿರುವ ಸಿದ್ದರಾಮಯ್ಯ, “ಯಡಿಯೂರಪ್ಪನವರನ್ನು ಕಂಡರೆ ನನಗೆ ಅಯ್ಯೋ ಅನ್ಸುತ್ತೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನೆಲ್ಲ ಕತ್ತರಿಸಲಾಗುತ್ತಿದೆ. ನೆರೆ ಪರಿಹಾರವನ್ನೂ ಕೇಳುವ ಧೈರ್ಯ ಅವರಿಗಿಲ್ಲ. ಸುಮ್ಮನೆ ಹೀಗೆ ತಂತಿ ಮೇಲೆ ಯಾಕೆ ನಡೆಯುತ್ತೀರಿ. ಹೀಗೆ ತಂತಿ ಮೇಲೆ ನಡೆದು ಕೆಳಗೆ ಬೀಳುವ ಬದಲು ರಾಜೀನಾಮೆ ಕೊಟ್ಟು ನಡೆಯಿರಿ” ಎಂದು ಗೇಲಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದ ಕುರಿತು ಮಾತನಾಡಿರುವ ಅವರು, “ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಮುನಿಯಪ್ಪ ಸೇರಿದಂತೆ ಅನೇಕರು ಪಕ್ಷದಲ್ಲಿ ನನ್ನ ವಿರುದ್ಧ ಇದ್ದಾರೆ ಎಂಬುದು ಕೇವಲ ಮಾಧ್ಯಮಗಳ ಊಹೆ ಅಷ್ಟೆ. ಟಿವಿಯಲ್ಲಿ ಬರೋದನ್ನೆಲ್ಲ ನಂಬಬೇಡಿ. ಹೈಕಮಾಂಡ್ ನನ್ನನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ನೇಮಕ ಮಾಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಿರುವ ನೆರೆ ಪರಿಹಾರ ವಿಳಂಬದ ಕುರಿತು ಮಾತನಾಡಿದ ಅವರು, “ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಣು, ಕಿವಿ, ಮೂಗು ಇಲ್ಲದ ದಪ್ಪ ಚರ್ಮದ ಸರ್ಕಾರ. ರಾಜ್ಯದ ನೆರೆಯ ಸ್ಥಿತಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕಿತ್ತು.
ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿದ್ದ ಸಂದರ್ಭದಲ್ಲಿ ನೆರೆ ಬಂದಾಗ ಅವರು ಖುದ್ದು ಇಲ್ಲಿಗೆ ಬಂದು ಮಧ್ಯಂತರ ಪರಿಹಾರ ಘೋಷಿಸಿದ್ದರು. ಹೀಗಾಗಿ ಯಡಿಯೂರಪ್ಪನವರೆ ನಿಮಗೆ ಧೈರ್ಯವಿಲ್ಲದಿದ್ದರೆ ಕೇಂದ್ರದ ಬಳಿ ನಮ್ಮನ್ನು ಕರೆದುಕೊಂಡು ಹೋಗಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಹಣವನ್ನು ನಾವು ತಂದು ಕೊಡುತ್ತೇವೆ” ಎಂದು ಸವಾಲು ಹಾಕಿದ್ದಾರೆ.
“ನೆರೆ ಸಂತ್ರಸ್ತರಿಗೆ 10 ಸಾವಿರ ರೂಪಾಯಿಯನ್ನೂ ಈ ರಾಜ್ಯ ಸರ್ಕಾರ ನೆಟ್ಟಗೆ ನೀಡಿಲ್ಲ ಎಂದು ಕಿಡಿ ಕಾರಿರುವ ಸಿದ್ದರಾಮಯ್ಯ, ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಸಂಪೂರ್ಣವಾಗಿ ನೆರೆ ಪೀಡಿತ ಬೆಳಗಾವಿ ಜಿಲ್ಲೆಯಲ್ಲೇ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.