ದೆಹಲಿ ಹೈಕೋರ್ಟ್​ ಅಂಗಳದಲ್ಲಿ ಡಿಕೆಶಿ ಜಾಮೀನು ಅರ್ಜಿ; ಇಂದೇ ವಿಚಾರಣೆ ಮತ್ತು ತೀರ್ಪು

ನವ ದೆಹಲಿ; ಕಾಂಗ್ರೆಸ್ ಪ್ರಭಾವಿ ನಾಯಕ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ದೆಹಲಿ ಹೈಕೋರ್ಟ್ನಲ್ಲಿ ನಡೆಯಲಿದ್ದು, ಇಂದಾದರೂ ಬಿಡುಗಡೆ ಭಾಗ್ಯ ಸಿಗುವ ವಿಶ್ವಾಸದಲ್ಲಿ ಮಾಜಿ ಸಚಿವರು ಇದ್ದಾರೆ.

ಜಾರಿ ನಿರ್ದೇಶನಾಲಯದಿಂದ (ಇಡಿ) ಕಳೆದ ಮೂರು ವಾರಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ಕಳೆದ ಬುಧವಾರ ಸಿಬಿಐ ವಿಶೇಷ ನ್ಯಾಯಾಲ ತಿರಸ್ಕರಿಸಿತ್ತು. ಇಡಿ ಅಧಿಕಾರಿಗಳ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ್ದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಜಾಮೀನು ಅರ್ಜಿಯನ್ನು ವಜಾ ಮಾಡಿ ನ್ಯಾಯಾಂಗ ಬಂಧನವನ್ನು ಮುಂದುವರೆಸಿದ್ದರು.

ಈ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ಬುಧವಾರ ಸಂಜೆಯೇ ಈ ಕುರಿತು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಪರಿಣಾಮ ಕಳೆದ ಗುರುವಾರ (ಸೆಪ್ಟೆಂಬರ್.26) ದಂದೇ ದೆಹಲಿ ಹೈಕೋರ್ಟ್ ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿತ್ತು. ಇಡೀ ದಿನ ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ ಮತ್ತು ದಯಾನ್ ಕೃಷ್ಣನ್ ವಾದ ಮಂಡಿಸಿದ್ದರು.

“ಇಡಿ ಅಧಿಕಾರಿಗಳು ತನಿಖೆ ವೇಳೆ ಡಿಕೆಶಿ ಅವರಿಂದ 50ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ವಿಚಾರಣೆ ವೇಳೆ ದಾಖಲಿಸಿಕೊಂಡಿರುವ ಮಹತ್ವದ ದಾಖಲಾತಿಗಳನ್ನು ಮತ್ತೆ ಡಿಕೆಶಿ ಅವರಿಗೆ ಕೊಡಿಸುವಂತೆ ನ್ಯಾಯಾಲಯದ ಎದುರು ಮನವಿ ಮಾಡಿಕೊಂಡಿದ್ದರು. ಮುಂದಿನ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಈ ದಾಖಲೆ ತಮಗೆ ಎಷ್ಟರ ಮಟ್ಟಿಗೆ ಅವಶ್ಯಕತೆ ಇದೆ ಎಂದು ಡಿಕೆಶಿ ಪರ ವಕೀಲರು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಟ್ಟಿದ್ದರು.

ಆದರೆ, ಇಡಿ ಪರ ವಕೀಲರು ಡಿಕೆಶಿ ಗೆ ಜಾಮೀನು ನೀಡುವುದನ್ನು ಕಟುವಾಗಿ ವಿರೋಧಿಸಿದ್ದರು. ಪರಿಣಾಮ ದೆಹಲಿ ಹೈಕೋರ್ಟ್ ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ (ಸೆಪ್ಟೆಂಬರ್.30) ಮುಂದೂಡಿತ್ತು.

ಹೀಗಾಗಿ ಇಂದು ಮತ್ತೆ ಹೈಕೋರ್ಟ್​ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, “ಒಟ್ಟು 19 ದಿನ ಡಿಕೆಶಿ ಇಡಿ ಅಧಿಕಾರಿಗಳ ವಿಚಾರಣೆಗೆ ಒಳಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇತರರನ್ನು ವಿಚಾರಿಸಿದ್ದಾರೆ. ಅಧಿಕಾರಿಗಳು ಕೇಳಿದ ದಾಖಲೆಗಳು ಮತ್ತು ಮಾಹಿತಿಯನ್ನೂ ನೀಡಲಾಗಿದೆ. ಮುಂದೆಯೂ ಅಧಿಕಾರಿಗಳ ತನಿಖೆಗೆ ಡಿಕೆಶಿ ಸಹಕರಿಸಲಿದ್ದಾರೆ. ಅಲ್ಲದೆ, ಅವರ ಆರೋಗ್ಯದಲ್ಲೂ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇದರ ಆಧಾರದ ಮೇಲೆ ಜಾಮೀನು ನೀಡುವಂತೆ” ಡಿಕೆಶಿ ಪರ ವಕೀಲರು ನ್ಯಾಯಾಲಯದ ಎದುರು ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ