ಬೆಂಗಳೂರು, ಸೆ.30- ಜಾರಿ ನಿರ್ದೇಶನಾಲಯದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿಂದು ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದಿಂದ ನನಗೆ ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ. ಒಂದು ವೇಳೆ ನೋಟಿಸ್, ಸಮನ್ಸ್ ಬಂದರೆ ಒಂದು ಕ್ಷಣವೂ ವಿಳಂಬ ಮಾಡದೆ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದರು.
ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಮಾಧ್ಯಮದವರಿಗೂ ಉತ್ತರ ಕೊಡುತ್ತೇವೆ. ಅಧಿಕಾರಿಗಳಿಗೂ ಉತ್ತರ ನೀಡುತ್ತೇವೆ. ಇದರ ಹಿಂದಿರುವವರಿಗೂ ಉತ್ತರ ನೀಡುತ್ತೇವೆ. ನಾನು ಈಗಷ್ಟೇ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರು ಆತ್ಮವಿಶ್ವಾಸದಿಂದ್ದಾರೆ. ಅವರು ಧೈರ್ಯಗೆಟ್ಟಿಲ್ಲ. ಆರೋಗ್ಯವೂ ಸ್ಥಿರವಾಗಿದೆ. ಕಷ್ಟದ ಕಾಲ ಎಂದುಕೊಂಡು ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಅ.10ರಂದು ನಿಗದಿಯಾಗುವ ಸಾಧ್ಯತೆ ಇತ್ತು. ಆದರೆ, ನ್ಯಾಯಾಲಯಕ್ಕೆ ರಜೆ ಇದೆ. ರಜೆ ಕಾಲದಲ್ಲೂ ವಿಚಾರಣೆ ನಡೆಸಲು ನ್ಯಾಯಮೂರ್ತಿಗಳು ಸಿದ್ದರಿದ್ದರು. ಅಧಿಕಾರಿಗಳು, ವಕೀಲರು ಸಮಯ ಕೇಳಿದ್ದರಿಂದ ಅ.14ಕ್ಕೆ ಮುಂದೂಡಿಕೆಯಾಗಿದೆ. ಅಂದು ಜಾಮೀನಿನ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ ಎಂದರು.
ಡಿ.ಕೆ.ಸುರೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಅಣ್ಣ-ತಮ್ಮಂದಿರಿಗೆ ಗ್ರಹಚಾರ ಕೆಟ್ಟಿದೆ ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಅದನ್ನು ನಾನು ನೋಡಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ. ಮಾಧ್ಯಮಗಳಲ್ಲೇ ಸುದ್ದಿಗಳು ಬಿತ್ತರವಾಗುತ್ತವೆ. ಅಧಿಕಾರಿಗಳು ನಮಗಿಂತಲೂ ನಿಮಗೆ ಹೆಚ್ಚು ಮಾಹಿತಿ ಕೊಡುವಂತಿದೆ. ನೀವು ಅದನ್ನು ಮುಂದಿಟ್ಟುಕೊಂಡು ತೀರ್ಪುಗಳನ್ನೇ ಬರೆಯುತ್ತಿದ್ದೀರಾ. ಎಲ್ಲವನ್ನೂ ಗಮನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ವಿರುದ್ಧವೂ ಕಾನೂನಾತ್ಮಕವಾಗಿ ಯಾವ ರೀತಿ ಕ್ರಮಕೈಗೊಳ್ಳಬೇಕೆಂದು ಚಿಂತನೆ ನಡೆಸಿದ್ದು, ವಕೀಲರ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.