ದಿಢೀರ್ ಬೆಳವಣಿಗೆಯಲ್ಲಿ ನಿಗದಿಯಂತೆ ನಾಳೆಯೇ ಮೇಯರ್ ಹಾಗೂ ಉಪಮೇಯರ್ ಚುನಾವಣೆ

ಬೆಂಗಳೂರು, ಸೆ.30- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆದೇಶ ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ನಾಳೆಯೇ ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಸುವುದಾಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಾಳೆ ನಡೆಯಬೇಕಾಗಿದ್ದ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವಂತೆ ಆದೇಶ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿಂದು ಹೇಳಿಕೆ ನೀಡಿದ್ದರು.

ಅದನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಚುನಾವಣೆ ಮುಂದೂಡಿಕೆಗೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಇನ್ನೇನು ಚುನಾವಣೆ ಮುಂದೂಡಿಕೆಯಾಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ನಿಗದಿಯಂತೆ ನಾಳೆಯೇ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮತ್ತು ನಾಲ್ಕು ಸ್ಥಾಯಿ ಸಮಿತಿ ಆಯ್ಕೆಗೆ ಚುನಾವಣೆಯ ಮುಹೂರ್ತ ನಿಗದಿಯಾಗಿದೆ.

ಇತ್ತೀಚೆಗೆ ಸ್ಥಾಯಿ ಸಮಿತಿಗಳ ಆಯ್ಕೆ ಸಂಬಂಧಪಟ್ಟ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನಿಯಮಾನುಸಾರ ಸ್ಥಾಯಿ ಸಮಿತಿ ಮತ್ತು ಮೇಯರ್, ಉಪಮೇಯರ್ ಆಯ್ಕೆಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು. ಹಾಗಾಗಿ ನಾಳೆ ನಡೆಯಬೇಕಿದ್ದ ಚುನಾವಣೆಯನ್ನು ಒಂದೂವರೆ ತಿಂಗಳ ಕಾಲ ಮುಂದೂಡುವಂತೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದರು.

ಆದರೆ, ಇದ್ಯಾವುದಕ್ಕೂ ಮನ್ನಣೆ ನೀಡಿದ ಪ್ರಾದೇಶಿಕ ಆಯುಕ್ತರು ನಾಳೆ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು, ಕಾನೂನು ಪ್ರಕಾರ ಚುನಾವಣೆ ನಡೆಸಬೇಕಾಗಿದೆ. ಒಂದು ವರ್ಷಕ್ಕೆ ಮೇಯರ್ ಅವಧಿ ಇದೇ ತಿಂಗಳ 27ಕ್ಕೆ ಮುಗಿಯಲಿದೆ. ಮುಂದಿನ ಅವಧಿಗೆ ಮೇಯರ್ ಆಯ್ಕೆಗೆ ಚುನಾವಣೆ ನಡೆಸಬೇಕಾಗಿದೆ. ಸರ್ಕಾರ ಪತ್ರ ಬರೆದಿರುವ ಪತ್ರವನ್ನೂ ಗಮನಿಸಿದ್ದೇನೆ.

ಹೈಕೋರ್ಟ್ ಆದೇಶ ಮತ್ತು ಕರ್ನಾಟಕ ಮುನ್ಸಿಪಲ್ ಆಕ್ಟ್ ಆಧರಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಾವು ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ನಾಲ್ಕು ಸ್ಥಾಯಿ ಸಮಿತಿ, ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದೆ ಎಂದು ಪುನರುಚ್ಚರಿಸಿದರು.

ನಾಳೆ ಬೆಳಗ್ಗೆ 11 ಗಂಟೆಗೆ ಮೇಯರ್ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ನಾಮಪತ್ರ ಸಲ್ಲಿಕೆ, 10 ಗಂಟೆಗೆ ನಾಮಪತ್ರ ಹಿಂತೆಗೆದುಕೊಳ್ಳುವುದು, 11 ಗಂಟೆಗೆ ಅಗತ್ಯಬಿದ್ದರೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಬಿಬಿಎಂಪಿ ಕಚೇರಿಯಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಪ್ರತಿ ಪಕ್ಷ ಕಾಂಗ್ರೆಸ್ ಕೂಡ ಚುನಾವಣೆಗೆ ಸಿದ್ಧತೆ ನಡೆಸಿದ್ದು, ಬಿಜೆಪಿಯ ಒಳ ಜಗಳದ ಲಾಭ ಪಡೆಯಲು ಮುಂದಾಗಿರುವ ಪಕ್ಷ ತನ್ನೆಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.

ಪಕ್ಷೇತರ ಆರು ಸದಸ್ಯರಲ್ಲಿ ಮೂವರು ಸದಸ್ಯರು ಈಗಾಗಲೇ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಉಳಿದ ಮೂವರು ಕೂಡ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯಲಿದೆಯೇ ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ