ಕೊಪ್ಪಳ ಕ್ಷೇತ್ರದ 289 ಬೂತ್‌ಗಳಲ್ಲಿ ಸದಸ್ಯತಾ ಪೂರ್ಣ; ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ಕೊಪ್ಪಳ ಸೆ 29: ಬಿಜೆಪಿ ಕೇಂದ್ರ ಮತ್ತು ರಾಜ್ಯ ಘಟಕದ ಸೂಚನೆ ಮೇರೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 289 ಬೂತ್‌ಗಳಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತಾ ಅಭಿಯಾನ ಬಹುತೇಕ ಸಂಪೂರ್ಣ ಯಶಸ್ವಿಗೊಂಡಿದ್ದು, ಆಯಾ ಬೂತ್‌ಗಳ ಅಧ್ಯಕ್ಷರು, ಕಾರ್ಯದರ್ಶಿ ಸರಿದಂರೆ ಸದಸ್ಯರು ಸೇರಿ ಒಟ್ಟು 12 ಪದಾಧಿಕಾರಿಗಳ ತಂಡವನ್ನು ರಚಿಸಿ ಪದಗ್ರಹಣ ಮಾಡಲಾಗುತ್ತಿದೆ ಎಂದು ಸಂಸದರಾದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.

ಕೊಪ್ಪಳ ತಾಲ್ಲೂಕಿನ ಓಜಿನಹಳ್ಳಿ ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಬೂತ್ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಉಜ್ವಲ ಪ್ಲಸ್ ಯೋಜನೆಯಡಿ ಗ್ಯಾಸ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಗಳಲ್ಲಿ ಸದಸ್ಯತಾ ಅಭಿಯಾನ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಅದರಂತೆ ನಮ್ಮ ಕೊಪ್ಪಳ ವಿಧಾನಸಭಾ ಕ್ಷೇತ್ರದ 289 ಬೂತ್‌ಗಳಲ್ಲೂ ಈ ಕಾರ್ಯವನ್ನು ಪಕ್ಷದ ಕಾರ್ಯಕರ್ತರು, ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಅತ್ಯಂತ ಯಶಸ್ವೀಯಾಗಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಬೂತ್‌ಗಳ ಪೂರ್ಣ ಮಾಹಿತಿ ಇದ್ದು, ಉಳಿದಂತೆ ಇನ್ನೇನು ಎರಡು ದಿನಗಳಲ್ಲಿ ಸಿಗಲಿದ್ದು, ಶೀಘ್ರದಲ್ಲೇ 12 ಪದಾಧಿಕಾರಿಗಳು ಇರುವ ಆಯಾ ಬೂತ್ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.

ಒಂದು ಬೂತ್ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ 10 ಸದಸ್ಯರು ಇರಲಿದ್ದಾರೆ. ಪಕ್ಷವನ್ನು ಇನ್ನಷ್ಟು ಬೇರುಮಟ್ಟದಲ್ಲಿ ಗಟ್ಟಿಗೊಳಿಸಿ ಪಕ್ಷದ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಭಿಯಾನ ಕ್ಷೇತ್ರದಲ್ಲಿ ಸಂಪೂರ್ಣ ಯಶಸ್ವಿಗೊಂಡಿದೆ. ವಿದ್ಯಾರ್ಥಿಗಳು, ಯುವಕ-ಯುವತಿಯರು, ರೈತರು, ವ್ಯಾಪಾರಿಗಳು, ರೈತ ಮಹಿಳೆಯರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ಸ್ಥರಗಳ ಜನತೆ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಆ ಮೂಲಕ ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದರು.ಸದಸ್ಯತಾ ಅಭಿಯಾನದಲ್ಲಿ ಪಾಲ್ಗೊಂಡು ಪಕ್ಷಕ್ಕೆ ಬಲ ನೀಡಿದ ಪಕ್ಷದ ಜಿಲ್ಲಾ ಮಟ್ಟದ, ತಾಲೂಕು, ನಗರ, ಹೋಬಳಿ ಮಟ್ಟದ ಎಲ್ಲಾ ಹಂತದ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ನಾವು ಅಭಾರಿಯಾಗಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ನಡೆಯಲಿವೆ. ಜಿಲ್ಲೆಗೂ ಸಾಕಷ್ಟು ಅನುದಾನ, ಹೊಸ ಹೊಸ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಉಜ್ವಲ ಪ್ಲಸ್ ಯೋಜನೆಯಡಿ ಇಡೀ ದೇಶದಲ್ಲಿ ಒಟ್ಟು ೭ಕೋಟಿ ಬಡ ಕುಟುಂಬಗಳಿಗೆ ಮೋದಿ ಸರ್ಕಾರ ಗ್ಯಾಸ್ ವಿತರಿಸಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೂ ಬಹುತೇಕ ಕುಟುಂಬಗಳಿಗೆ ತಲುಪಿಸಲಾಗಿದೆ. ಇನ್ನೂ ಸಿಗದೇ ಇರುವ ಕುಟುಂಬಗಳಿಗೆ ಬರುವ ದಿನಗಳಲ್ಲಿ ಗ್ಯಾಸ್ ಕಿಟ್ ವಿತರಿಸಿ ಇಡೀ ಕ್ಷೇತ್ರವನ್ನು ಹೊಗೆ ರಹಿತ ಮಾಡಲಾಗುವುದು. ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚು ಹೆಚ್ಚು ಆಗುತ್ತಿದ್ದು, ವಿಶ್ವ ಮಟ್ಟದಲ್ಲಿ ಭಾರತದಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಇದರಿಂದಾಗಿ ಭಾರತ ವಿಶ್ವಗುರು ಆಗುವ ಕಾಲ ದೂರವಿಲ್ಲ ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಜ್ವಲ್ ಪ್ಲಸ್ ಯೋಜನೆಯಡಿ ಗ್ಯಾಸ್ ಕಿಟ್ ವಿತರಿಸಿದ ಸಂಸದರಾದ ಸಂಗಣ್ಣ ಕರಡಿಯವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ