ಮೈಸೂರು: ಮೈಸೂರು ದಸರಾ 2019 ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿ ಎಸ್. ಎಸ್.ಎಲ್. ಭೈರಪ್ಪ ವಿಚಾರವಾದಿಗಳಿಗೆ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ. ತಾವು ದೇವರನ್ನು ನಂಬುವುದಾಗಿ ತಿಳಿಸಿದ ಭೈರಪ್ಪ, ತಮ್ಮ ಮೊಮ್ಮಕ್ಕಳನ್ನೂ ದೇವರ ದರ್ಶನಕ್ಕೆ ಕರೆದುಕೊಂಡು ಬರ್ತೇನೆ ಎಂದು ಹೇಳಿದರು. ಅಷ್ಟೇ ಅಲ್ಲ, ಆಧ್ಯಾತ್ಮದ ಬಗ್ಗೆ ಕಥೆಯೊಂದನ್ನ ಹೇಳಿ ನೆರೆದಿದ್ದ ಜನರಿಗೆ ಆಧ್ಯಾತ್ಮದ ಪಾಠ ಹೇಳಿದರು.
ಸಾಹಿತಿಗಳು, ವಿಚಾರವಂತರು, ಪ್ರಗತಿಪರರು ಅಂದರೆ ಅವರು ದೇವರನ್ನೇ ನಂಬಲ್ಲ ಅನ್ನೋ ಭಾವನೆ ಜನಸಾಮಾನ್ಯರಲ್ಲಿದೆ ಎಂದು ಹೇಳಿದ ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ, ಸಾಹಿತಿಗಳು ದೇವರಿಗೆ ಪೂಜೆಯನ್ನೂ ಮಾಡ್ತಾರೆ, ಮಂಗಳಾರತಿ ತೆಗೆದುಕೊಳ್ತಾರೆ ಎಂದು ತಿಳಿಸಿದರು. ಸಾಹಿತಿಗಳು ದೇವರನ್ನು ನಂಬೋದಿಲ್ಲ ಅನ್ನೋ ಅಭಿಪ್ರಾಯ ಜನರಿಗೆ ಮೂಡಿರಬಹುದು. ಆದರೆ, ನಾನು ಆ ರೀತಿ ನಂಬಿಕೆ ಇರುವ ಸಾಹಿತಿ ಅಲ್ಲ ಎಂದು ಭೈರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ದೈವಭಕ್ತಿಯನ್ನ ವಿವರಿಸಿದ ಭೈರಪ್ಪ, ವಿದ್ಯಾರ್ಥಿಯಾಗಿದ್ದಾಗ ತಾವು ವಾರಕ್ಕೊಮ್ಮೆಯಾದ್ರೂ ಚಾಮುಂಡಿ ಬೆಟ್ಟವನ್ನು ಮೆಟ್ಟಿಲಿನಿಂದ ಹತ್ತಿ ದೇವರ ದರ್ಶನ ಪಡೆಯುತ್ತಿದ್ದೆ ಎಂದು ನೆನಪಿಸಿಕೊಂಡರು. ವಿದ್ಯಾರ್ಥಿಯಾಗಿದ್ದ ವೇಳೆ ವಾರಕ್ಕೊಮ್ಮೆ ದರ್ಶನ ಪಡೆಯುತ್ತಿದ್ದೆ, ಆದರೆ ಈಗ ವರ್ಷಕ್ಕೊಮ್ಮೆ ವಾಹನದಲ್ಲಿ ಬೆಟ್ಟಕ್ಕೆ ಬರ್ತೇನೆ ಎಂದು ಭೈರಪ್ಪ ಹೇಳಿದರು. ನನ್ನ ಮೂವರು ಮೊಮ್ಮಕ್ಕಳನ್ನೂ ದೇವಸ್ಥಾನಕ್ಕೆ ಕರೆತರುತ್ತೇನೆ. ಹೊಸ್ತಿಲ ಮೇಲೆ ಮಲಗಿಸಿ ತೀರ್ಥ ಹಾಕಿಸುತ್ತೇನೆ ಎಂದು ಭೈರಪ್ಪ ಹೇಳಿದರು. ಇಷ್ಟೆಲ್ಲಾ ಮಾಡುವ ನನಗೆ ದೇವರಲ್ಲಿ ನಂಬಿಕೆ ಇಲ್ಲ ಎನ್ನುವಂತಿಲ್ಲ. ಸಾಹಿತಿಗಳಿಗೆ ದೇವರಲ್ಲಿ ನಂಬಿಕೆ ಇಲ್ಲ ಅನ್ನೋದು ಸತ್ಯವಲ್ಲ ಎಂದ ಭೈರಪ್ಪ, ವಿಚಾರವಂತರು ದೇವರನ್ನು ನಂಬೋದಿಲ್ಲ ಎಂದು ಹೇಳಿಕೊಳ್ತಾರೆ ಎಂದರು. ದೇವರ ಅಸ್ತಿತ್ವದ ಕುರಿತು ಒಂದು ಕಥೆಯನ್ನೂ ಭೈರಪ್ಪ ಹೇಳಿದರು.
ಒಂದು ಊರಿನಲ್ಲಿ ಒಬ್ಬ ದೊಡ್ಡ ಜಮೀನ್ದಾರನಿದ್ದ. ಆತನಿಗೆ ದೊಡ್ಡ ಮನೆ ಇತ್ತು. ಮನೆ ಹಿಂದೆ ಎರಡು ದೊಡ್ಡ ಹುಲ್ಲಿನ ಬಣವೆಗಳಿದ್ದವು. ದವಸ ಧಾನ್ಯ ಇಡುವ ಕಟ್ಟೆ ಇದ್ದವು. ಒಂದು ದಿನ ಪ್ರಯಾಣಿಕನೊಬ್ಬ ಈ ಸಿರಿವಂತ ಜಮೀನ್ದಾರನ ಮನೆಗೆ ಬಂದ. ಮನೆ ಎದುರು ನಿಂತು ಯಾರಿದ್ದೀರಿ ಎಂದು ಕೇಳಿದ. ಆಗ ಪ್ರಯಾಣಿಕನ ಎದುರಿಗೆ 10 ವರ್ಷದ ಹುಡುಗ ಬಂದು ನಿಂತ. ಬಾಲಕನನ್ನು ನೋಡಿದ ಪ್ರಯಾಣಿಕ, ಮನೆಯಲ್ಲಿ ದೊಡ್ಡವರಿಲ್ಲವೇ ಎಂದು ಪ್ರಶ್ನಿಸಿದ. ಪ್ರಯಾಣಿಕನ ಪ್ರಶ್ನೆಗೆ ಉತ್ತರಿಸಿದ ಬಾಲಕ, ತಮ್ಮ ತಂದೆ ತೋಟಕ್ಕೆ ಹೋಗಿದ್ದಾರೆ, ತಾಯಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಹೇಳಿದ. ನಿಮಗೇನು ಬೇಕು ಎಂದು ಕೇಳಿದ. ಪ್ರಯಾಣಿಕ ತನಗೆ ಒಂದು ಸೂಜಿ ಬೇಕು ಎಂದು ಕೇಳಿದ. ಬಾಲಕ ಕೂಡಲೇ ಮನೆಯೊಳಗೆ ಹೋಗಿ ಒಂದಷ್ಟು ಕಡೆ ಹುಡುಕಾಡಿದ. ದೇವರ ಫೋಟೋ, ಕಂಬ ಇನ್ನಿತರ ಕಡೆ ಹುಡುಕಾಡಿದ. ಎಲ್ಲಿಯೂ ಸಿಗಲಿಲ್ಲ. ಹೊರಗೆ ಬಂದು ಪ್ರಯಾಣಿಕನಿಗೆ ಮನೆಯಲ್ಲಿ ಸೂಜಿ ಇಲ್ಲ ಎಂದು ಹೇಳಿದ. ಆಗ ಪ್ರಯಾಣಿಕ, ನೀನು ಒಂದೆರಡು ಕಡೆ ಅಷ್ಟೇ ಹುಡುಕಾಟ ನಡೆಸಿ ಮನೆಯಲ್ಲಿ ಸೂಜಿಯೇ ಇಲ್ಲ ಎಂದು ಹೇಳಬೇಡ. ಅಷ್ಟು ದೊಡ್ಡ ಮನೆಯಲ್ಲಿ ನಿನ್ನ ಕಣ್ಣಿಗೆ ಬಿದ್ದಿಲ್ಲ ಅಷ್ಟೇ ಎಂದ. ಇದರಿಂದ ಸಿಟ್ಟಿಗೆದ್ದ ಬಾಲಕ, ಸೂಜಿ ಇಲ್ಲ ಅಂದ್ರೆ ಇಲ್ಲ ಹೋಗಿ ಎಂದ. ಈ ಕಥೆಯ ಆಧ್ಯಾತ್ಮಿಕ ಸಾರ ಏನೆಂದರೆ, ಎಲ್ಲೋ ಒಂದೆರಡು ಕಡೆ ಹುಡುಕಿದ ಮಾತ್ರಕ್ಕೆ ಇಡೀ ಪ್ರಪಂಚದಲ್ಲಿ ದೇವರೇ ಇಲ್ಲ ಎಂದು ತೀರ್ಮಾನಕ್ಕೆ ಬರಬಾರದು.
ಈ ಕಥೆಯನ್ನು ಹೇಳಿದ ಬಳಿಕ ಪ್ರಗತಿಪರರು, ವಿಚಾರವಾದಿಗಳಿಗೆ ಭೈರಪ್ಪ ಕುಟುಕಿದರು. ಪ್ರಪಂಚವೆಲ್ಲಾ ನಮಗೆ ಗೊತ್ತು, ದೇವರಿಲ್ಲ ಎಂದು ಪ್ರಗತಿಪರರು ಹೇಳ್ತಾರೆ. ಆದ್ರೆ, ಈ ಬ್ರಹ್ಮಾಂಡದಲ್ಲಿ ಎಷ್ಟು ಗ್ಯಾಲಕ್ಸಿ ಇವೆ ಎಂದೇ ಯಾರಿಗೂ ಗೊತ್ತಿಲ್ಲ. ಬ್ರಹ್ಮಾಂಡ ವೃದ್ಧಿಸುತ್ತಲೇ ಇದೆ ಎಂಬಲ್ಲಿಗೆ ವಿಜ್ಞಾನ ನಿಂತು ಹೋಗುತ್ತೆ. ಹೀಗಿರುವಾಗ ದೇವರಿಲ್ಲ ಅನ್ನೋದು ದಾಷ್ಟ್ಯದ ಮಾತು ಎಂದು ಸಾಹಿತಿ ಎಸ್. ಎಲ್. ಭೈರಪ್ಪ ಹೇಳಿದ್ದಾರೆ.
‘ಕೃಷಿ ಹಾಳಾಗಲು ರಾಜಕಾರಣಿಗಳು ಕಾರಣ‘
ಜನರಲ್ಲಿ ಇದ್ದ ಕಾಯಕನಿಷ್ಠೆಯನ್ನು ಹಾಳು ಮಾಡಿದವರೇ ರಾಜಕಾರಣಿಗಳು ಎಂದು ಹರಿಹಾಯ್ದ ಭೈರಪ್ಪ, ನಮ್ಮಲ್ಲಿ ಕೃಷಿ ಹಾಳಾಗಲು ರಾಜಕಾರಣಿಗಳು ಕಾರಣ ಎಂದು ಆರೋಪಿಸಿದ್ದಾರೆ. ಬಸವಣ್ಣ ಹೇಳಿದ್ದು ಕಾಯಕನಿಷ್ಠೆ. ಆದರೆ ಅದನ್ನು ರಾಜಕಾರಣಿಗಳು ಹಾಳು ಮಾಡಿದರು. ನಂತರ ಜಾತಿ ಇರಬಾರದು ಎಂದು ಬಸವಣ್ಣ ಹೇಳಿದರು. ಅಂದಿನ ಸ್ಥಿತಿಗೆ ಒಪ್ಪುವ ಸ್ಥಿತಿ ಇರಲಿಲ್ಲ. ಸಮಾಜ ಪಕ್ವ ಆಗಿರಲಿಲ್ಲ. ಈಗ ಕಾಲ ಬದಲಾಗಿದೆ. ಕೃಷಿ ಎಕಾನಮಿ ಕಾಲ ಹೋಗಿದೆ. ಲಿಂಗಭೇದ ಇಲ್ಲದೆ ಉದ್ಯೋಗ ಮಾಡುತ್ತಿದ್ದಾರೆ. ಆರ್ಥಿಕ ಸ್ವಾವಲಂಬನೆ ಬಂದಾಗ ಅಂತರ್ ಜಾತಿ ವಿವಾಹ ಹೆಚ್ಚಾಗಿ ನಡೆಯುತ್ತಿದೆ. ಬಸವಣ್ಣನ ತತ್ವ ಇಂದು ಸಾಕಾರವಾಗಿದೆ. ಆಗಿನ ಸಮಾಜ, ವ್ಯಕ್ತಿ ಸ್ವಾತಂತ್ರ್ಯ ಹೇಗಿತ್ತು, ಈಗ ಹೇಗಿದೆ ಅನ್ನೋದನ್ನು ನೋಡಬೇಕಿದೆ. ಆದರೆ ಬಲವಂತವಾಗಿ ಅಂತರ್ ಜಾತಿ ವಿವಾಹ ಮಾಡುತ್ತೇನೆ ಎಂದು ಕೆಲವರು ಬಾವುಟ ಹಿಡಿದು ಹೊರಡುವುದು ಸರಿಯಲ್ಲ. ಜಾತಿ ಹೊರತು ಪಡಿಸಿ ಹಲವು ವಿಷಯ ಹೊಂದಾಣಿಕೆ ಆಗಬೇಕು ಎಂದು ಭೈರಪ್ಪ ಅಭಿಪ್ರಾಯಪಟ್ಟರು.
ಅಯ್ಯಪ್ಪ ದೇಗುಲಕ್ಕೆ ಸ್ತ್ರೀ ಪ್ರವೇಶ ನಿಷೇಧ ಪ್ರಸ್ತಾಪ
ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ವಿಚಾರವನ್ನೂ ಇದೇ ಸಂದರ್ಭದಲ್ಲಿ ಭೈರಪ್ಪ ಪ್ರಸ್ತಾಪಿಸಿದರು. ಮಕ್ಕಳಿಗೆ, ಹಿರಿಯ ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಇದೆ. ಇದು ಪ್ರಕೃತಿ ಗೆ ಸಂಬಂಧಿಸಿದ್ದು. ಆದರೆ ಕೆಲವರು ಕೋರ್ಟ್ಗೆ ಹೋದರು. ಕಮ್ಯುನಿಸ್ಟ್ ಆಡಳಿತ ಇರುವ ಕೇರಳದಲ್ಲಿ ಕೆಲವು ಮಹಿಳೆಯರನ್ನು ದೇಗುಲಗೊಳಗೆ ನುಗ್ಗಿಸಿದರು. ಅದರಲ್ಲಿ ಮುಸ್ಲಿಂ ಮಹಿಳೆಯರೂ ಇದ್ದರು. ಆಗ ಆಕೆಗೆ ಮುಸ್ಲಿಮರು ಆಕ್ಷೇಪಿಸಿದರು. ಆಕೆ ಕ್ಷಮೆ ಕೇಳಿದಳು. ಕಮ್ಯುನಿಸ್ಟ್ ಸರಕಾರಕ್ಕೆ ಇದೆಲ್ಲ ಏಕೆ ಬೇಕಿತ್ತು ಎಂದು ಪ್ರಶ್ನಿಸಿದ ಭೈರಪ್ಪ, ನಂಬಿಕೆ ವಿಚಾರದಲ್ಲಿ ಲಿಂಗ ಅಸಮಾನತೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಭೈರಪ್ಪ ಅವರ ಉದ್ಘಾಟನಾ ಭಾಷಣದ ಬಳಿಕ ಲಿಖಿತ ಭಾಷಣ ಓದಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಭೈರಪ್ಪ ಅವರು ಜ್ಞಾನಪೀಠ ಪುರಸ್ಕಾರಕ್ಕೆ ಅರ್ಹರು ಎಂದು ಹೇಳಿದರು.