ಯಡಿಯೂರಪ್ಪ ಸಿಎಂ ಆದಮೇಲೆ ನದಿಗಳು ತುಂಬಿ ಹರಿಯುತ್ತಿವೆ: ಜಿ.ಟಿ. ದೇವೇಗೌಡ ಹೊಗಳಿಕೆ

ಮೈಸೂರು: ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮ, ರಾಜಕೀಯ ರಂಗಿನಿಂದ ತುಂಬಿ ತುಳುಕುತ್ತಿತ್ತು. ಮಾಜಿ ಸಚಿವ ಜಿ. ಟಿ. ದೇವೇಗೌಡ, ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನೋ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿತ್ತು! ಏಕೆಂದರೆ, ಸಿಎಂ ಯಡಿಯೂರಪ್ಪ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಜಿಟಿಡಿ, ಭಾಷಣಕ್ಕೆ ಅವಕಾಶ ಕೊಟ್ಟ ಕೂಡಲೇ ಯಡಿಯೂರಪ್ಪ ಅವರನ್ನು ಹೊಗಳಲು ಶುರು ಮಾಡಿದರು! ಮುಖ್ಯಮಂತ್ರಿಗಳನ್ನು ಅವರ ಎದುರೇ ಹಾಡಿ ಹೊಗಳಿದರು.

ಬರದಿಂದ ಹಾಹಾಕಾರ ಎದ್ದ ಸ್ಥಿತಿಯಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆಯೇ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಎಲ್ಲೆಡೆ ಹಸಿರು ನೆಲೆಸಿದೆ. ಆರಂಭದ ದಿನಗಳಲ್ಲಿ ಒಬ್ಬರೇ ಸುತ್ತಾಡಿ ಪ್ರವಾಹ ಪರಿಸ್ಥಿತಿ ನಿಭಾಯಿಸಿದ್ದಾರೆ. ಅವರಿಗೆ ದೇವಿ ಇನ್ಮಷ್ಟು ಅನುಗ್ರಹ ನೀಡಲಿ. ಅವರ ಅವಧಿಯಲ್ಲಿ ರಾಮರಾಜ್ಯವಾಗಲಿ. ನಾನು ರಾಜಕೀಯ ಕಾರಣದಿಂದ ಇದನ್ನು ಹೇಳುತ್ತಿಲ್ಲ. ಕಥೆ ಕಟ್ಟುವವರು ಕಟ್ಟುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ದಸರಾಗೆ ಅದ್ಭುತ ಕೆಲಸ ಮಾಡಿದ್ದಾರೆ.’

ಇದು ಜಿ. ಟಿ. ದೇವೇಗೌಡ ಅವರ ಮಾತು. ಯಡಿಯೂರಪ್ಪ ಸಿಎಂ ಆದ ಬಳಿಕ ಉತ್ತಮ ಮಳೆಯಾಗುತ್ತಿರುವ ಕಾರಣ ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಇದೇ ವೇಳೆ, ಪ್ರವಾಹ ಪರಿಸ್ಥಿತಿ ಎದುರಾದಾಗ, ಸಚಿವ ಸಂಪುಟ ರಚನೆಯೇ ಆಗದಿದ್ದರೂ ಯಡಿಯೂರಪ್ಪ ಒಬ್ಬರೇ ಮುಂದೆ ನಿಂತು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದರು ಎಂದು ಜಿಟಿಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರನ್ನೂ ಜಿ. ಟಿ. ದೇವೇಗೌಡ ಹೊಗಳಿದ್ದಾರೆ.

ಕೇಂದ್ರ ಸಚಿವ ಸದಾನಂದ ಗೌಡರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು ಎಂದು ಸದಾನಂದ ಗೌಡರು ಆಕ್ಷೇಪ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿ ವಿರುದ್ಧ ಸದಾನಂದ ಗೌಡರು ಹರಿಹಾಯ್ದರು. ನಾನು ವಾಪಸ್ ಹೋಗ್ತೀನಿ ಎಂದು ಸದಾನಂದ ಗೌಡರು ಪಟ್ಟು ಹಿಡಿದ ಘಟನೆಯೂ ನಡೆಯಿತು. ಬಳಿಕ ಪೊಲೀಸರು ಸಮಾಧಾನಪಡಿಸಿದ ಬಳಿಕ, ಸದಾನಂದ ಗೌಡರು ಕಾರ್ಯಕ್ರಮಕ್ಕೆ ಹಾಜರಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ